ನಾಗವೇಣಿ

ನಾಗವೇಣಿ

Short story   published in Karmaveera Deepavali Special issue 2006

ಅರೆ, ಎಂಟೂವರೆ ಆಗೋಯ್ತಲ್ಲ ಎಂದು ನಾಗವೇಣಿ ದಢಕ್ಕನೆ ಎದ್ದಳು. ಹೊರಗೆ ಮಳೆ ಜಿನುಗುತ್ತಿದೆ.. ಎಲ್ಲೆಲ್ಲೂ ಮಬ್ಬು ಆವರಿಸಿದೆ. ಕಂಪ್ಯೂಟರ್ ಟೇಬಲ್ ಈಗ ಕೊಂಚ ಬಿಳುಪಾಗಿ ಕಾಣಿಸುತ್ತಿದೆ.
ನಿನ್ನೆಯಿಂದ ಯಾವುದೋ ಪುಸ್ತಕವನ್ನು ಕಳ್ಳರ ಥರ ಇನ್ನೊಂದು ಕಂಪ್ಯೂಟರಿನಿಂದ ಶೇರ್ ಆಝಾ ಸಾಫ್ಟ್‌ವೇರ್ ಮೂಲಕ ಡೌನ್‌ಲೋಡ್ ಮಾಡಲು ಇಟ್ಟಿದ್ದು ನೆನಪಾಗಿ  ಮಾನಿಟರ್ ಆನ್ ಮಾಡಿದರೆ….. ಅರೆ… ಬರೀ ಎಂಟು ಮೆಗಾಬೈಟ್‌ಗಳ ಪುಸ್ತಕ ಅಂತೂ ಇವತ್ತು ಪೂರ್ಣವಾಗಿದೆ. ಮೂರು ದಿನಗಳಿಂದ ಹಾಕಿದ ಶ್ರಮ ಸಾರ್ಥಕವಾಯ್ತು. ಈ ಪುಸ್ತಕಾನ ಆ ರಾಂಗ್‌ನಾಥ್‌ಗೆ ಒಪ್ಪಿಸಿದರೆ ಸೈ. ಇವತ್ತೇನೋ ಪಾರ್ಟಿಗೆ ಕರೆದಿದಾರೆ. ಯಾಕೆ?


ರಾಂಗ್‌ನಾಥ್ ಹಾಗೆ ನನ್ನನ್ನು ಎಂದೂ ಪಾರ್ಟಿಗೆ ಕರೆಯುವುದಿಲ್ಲ. ಇವತ್ತು ಬೌರಿಂಗ್ ಇನ್‌ಸ್ಟಿಟ್ಯೂಟ್‌ಗೆ ಹೋಗಲೇಬೇಕಂತೆ… ಪುಸ್ತಕಗಳನ್ನು  ವಾಪಸು ಮಾಡ್ಲೇಬೇಕಂತೆ.. ಎಂದಾಗ ನಾನು ಇಲ್ಲ ಅನ್ನೋದಾದ್ರೂ ಹೇಗೆ?  ಮೂರು ತಿಂಗಳಿಂದ ಪಾರ್ಟಿ ನಾಪತ್ತೆ. ಎಲ್ಲೋ ಯಾವುದೋ ಸಾಫ್ಟ್‌ವೇರ್ ಬ್ಯುಸಿನೆಸ್ ಮಾಡ್ಕೊಂಡಿದೆ. ಸದಾ ಕಡು ಸಿಗರೇಟು ಸುಡುತ್ತ, ದೇಶದ ಎಕಾನಮಿ ಬಗ್ಗೆ ನಿರರ್ಗಳವಾಗಿ ಮಾತಾಡೋ ಆಸಾಮಿ ಈಗ ಸಾಫ್ಟ್‌ವೇರ್ ವ್ಯವಹಾರಕ್ಕೆ ಇಳಿದಿದೆ. ಸದಾ ಐರಿಶ್ ಪಬ್ಬಿನಲ್ಲಿ ಗಂಟೆಗಟ್ಟಳೆ ಊಟ ಮಾಡುವ ಆಸಾಮಿ ಈಗ ದಡಬಡ ಓಡಾಡಿಕೊಂಡು ಮಂಡ್ಯ, ವಸೂರು, ಬೆಳಗಾವಿ, ದಾವಣಗೆರೆ ಸುತ್ತುತ್ತಿದೆ. ಆಂಟಿವೈರಸ್ ಸಾಫ್ಟ್‌ವೇರ್‌ನಿಂದ ಹಿಡಿದು ಪೇರೆಂಟಲ್ ಗೈಡೆನ್ಸ್‌ವರೆಗೆ ಎಲ್ಲ ಬಗೆಯ ವೈವಿಧ್ಯಮಯ ಸಾಫ್ಟ್‌ವೇರ್‌ಗಳನ್ನು ರಾಂಗ್‌ನಾಥ್ ಮಾರೋದನ್ನು ನೋಡಿದರೆ  ಅರೆ, ಭಾರತ ದೇಶದಲ್ಲಿ ಇಂಥ ಸಾಫ್ಟ್‌ವೇರ್‌ಗಳನ್ನು ತಯಾರಿಸೋದೇ ಇಲ್ವ, ಎಲ್ಲವೂ ಇಂಪೋರ್ಟ್ ಆಗಬೇಕಾ ಅನ್ಸುತ್ತೆ..
ಹೀಗೆ ಯೋಚಿಸ್ತಾನೇ ಹಲ್ಲುಜ್ಜಿದರೆ ಹಲ್ಲುಗಳೆಲ್ಲ ಇನ್ನೊಂದು ತಿಂಗಳಲ್ಲಿಕಾಣೆಯಾಗಬಹುದು ಎಂಬ ಭಯ ಹುಟ್ಟಿ ನಾಗವೇಣಿ ವಾಶ್ ಬೇಸಿನ್‌ನತ್ತ ನಡೆದಳು. ದಾರಿಯಲ್ಲಿ ಒಂದೆರಡು ಜಿರಲೆಗಳು ಅಂಗಾತ ಬಿದ್ದು ನರಳುತ್ತಿದ್ದವು. ಅವುಗಳನ್ನು  ಗುಡಿಸಲೂ ನಾಗವೇಣಿಗೆ ಬೇಜಾರು. ಬಾಥ್‌ರೂಮಿಗೆ ದಿನಾಲೂ ಹಿಟ್  ಸ್ಪ್ರೇ ಮಾಡಿಯೇ ನಾಗವೇಣಿ ಮಲಗುತ್ತಾಳೆ. ಆಗತಾನೇ ಏಳುವ ಜಿರಲೆಗಳು ರಾತ್ರಿಯಿಡೀ ವಿಷದ ಹಂಗಿನಲ್ಲಿ ಒದ್ದಾಡಿ ಬೆಳಗಾಗೋ ಹೊತ್ತಿಗೆ ಹೈರಣಾಗಿರುತ್ತವೆ. ದಿನವೂ ಅವುಗಳನ್ನು ಕಸಬರಿಗೆಯಿಂದ ಸಾಯಿಸಿ ಎತ್ತಿ ಡಸ್ಟ್‌ಬಿನ್‌ಗೆ ಹಾಕುವುದು ಎಂದರೆ ನಾಗವೇಣಿಗೆ ಹಲ್ಲುಜ್ಜಿದಷ್ಟೇ ಸಲೀಸು ಮತ್ತು ನಿರಂತರ ಕಾಯಕ.
ಅದಿರಲಿ…. ಹೊರಗೆ ಮಳೆಹನಿಗೆ ಹಿಂದೂ ಪೇಪರ್ ಒದ್ದೆಯಾಗಿದೆಯೇನೋ ಎಂದು ನಾಗವೇಣಿ  ಸರಕ್ಕನೆ ಟವೆಲ್ ಹಿಡಿದುಕೊಂಡೇ ಧಾವಿಸಿದಳು. ಪೇಪರನ್ನು ಹುಡುಗ ಗ್ರಿಲ್‌ಗೆ ಸಿಗಿಸಿಯೇ ಹೋಗಿದ್ದಾನೆ.  ಇವತ್ತೂ ನೈಸ್ ಗಲಾಟೆ ಬಗ್ಗೆ ವಿಧಾನಸಭೆ ವರದಿ… ಮತ್ತೆ ಜಗಳ.. ಈ ರಾಜಕೀಯ ಪಕ್ಷಗಳಿಗೆ ಜಗಳ ಮ್ಯಾನೇಜ್ ಮಾಡೋದಕ್ಕೂ ರಾಂಗ್‌ನಾಥ್‌ಗೆ ಒಂದು ಸಾಫ್ಟ್‌ವೇರ್ ತಯಾರಿಸಲು ಹೇಳಬೇಕು ಎಂದು ಯೋಚಿಸುತ್ತ ನಾಗವೇಣಿ ಚಹಾ ಕುದಿಸಲು ನಡೆದಳು. ಅಲ್ಲಿ ಅವಳು ಚಹಾ ಮಾಡಿದಳು. ಆಮೇಲೆ ಒಂದಷ್ಟು ಈರುಳ್ಳಿ, ಟೊಮ್ಯಾಟೋ, ಶುಂಟಿ , ಹಸಿಮೆಣಸು, ಕೊತ್ತಂಬ್ರಿ ಸೊಪ್ಪು  ಕತ್ತರಿಸಿ ಎಗ್ ಬುರ್ಜಿ ಮಾಡಿದಳು.  ಹಾಗೇ ಕಂಪ್ಯೂಟರಿನಲ್ಲಿ ಡೌನ್‌ಲೋಡ್ ಮಾಡಿದ ಪುಸ್ತಕವನ್ನು  ಒಂದು ಸಿಡಿಗೆ ಬರ್ನ್‌ಮಾಡಿದಳು. ಅದರಿಂದಲೇ ಮ್ಯಾಗ್ನಟೂನ್ ವೆಬ್‌ಸೈಟಿಗೆ ಹೋಗಿ ಸೆಲ್ಟಿಕ್ ಮ್ಯೂಸಿಕ್ ಹಾಕಿದಳು. ಗೇಸರಿನಲ್ಲಿ ನೀರು ಹಾಯಿಸಿಕೊಂಡು ಬೆಚ್ಚಗೆ ಸ್ನಾನ ಮಾಡಿದಳು.ಛಲೋದಾದ ಹಸಿರು ಟೀ ಶರ್ಟ್ ಧರಿಸಿ, ಒಳ್ಳೆ ಕಪ್ಪು ಜೀನ್ಸ್  ಪ್ಯಾಂಟ್‌ಹಾಕಿಕೊಂಡು ಅದಕ್ಕೆ  ತಕ್ಕ ಎಥ್ನಿಕ್ ಹ್ಯಾಂಡ್‌ಬ್ಯಾಗ್ ಹೆಗಲೇರಿಸಿ ತನ್ನ ಸ್ಕೂಟಿಯನ್ನು ಹೊರಗೆಳೆದಳು…
ರಾಜಾಜಿನಗರದ ಅಂಡರ್‌ಪಾಸ್‌ನಲ್ಲಿ ಎಷ್ಟು ಹದವಾಗಿ ಸ್ಕೂಟಿಯನ್ನು ತಿರುಗಿಸಬಹುದು ಎಂಬುದೇ ಅವಳಿಗೆ ನಿಜಕ್ಕೂ ದಿನವೂ ಖುಷಿಕೊಡುವ ಸಂಗತಿ. ಯಾಕೆಂದರೆ ಅವಳು ಸುಮಾರು ಆರು ತಿಂಗಳುಗಳ ಕಾಲ ರಾಜಾಜಿನಗರ ಎಂಟ್ರೆನ್ಸ್‌ನಲ್ಲಿ ಭಾರೀ ಯಂತ್ರಗಳು ಕೆತ್ತಿದ  ದೊಡ್ಡ ಕಂದಕವನ್ನೇ  ನೋಡುತ್ತ ಈ ಅಂಡರ್‌ಪಾಸ್‌ನಲ್ಲಿ ಯಾವಾಗಾದ್ರೂ ರೈಡ್ ಮಾಡುತ್ತೀನೋ ಎಂದು ಪುಟ್ಟ ಕನಸು ಕಂಡಿದ್ದಳು. ಸುಜಾತಾ ಟಾಕೀಸಿನ ಬಳಿ ಇನ್ನೂ ಸಣ್ಣ ಗಂಟಲಾಗಿರೋ ರಸ್ತೆಯು ಅಗಲ ಆಗಬೇಕಿದ್ದರೂ ಟ್ರಾಫಿಕ್ ಎಷ್ಟು ಸ್ಮೂತ್ ಆಗಿದೆ ಎಂದು ರೇಡಿಯೋಸಿಟಿಗೂ ಫೋನ್‌ಮಾಡಿ ಸುಖ ಹಂಚಿಕೊಂಡಿದ್ದಳು. ವಾಸಂತಿ ಕೂಡಾ ಎಂಥ ನಗೆಯನ್ನು ಚೆಲ್ಲಿ ಹೌದಾ ನಾಗವೇಣಿಯವ್ರೆ…. ನಿಮ್ಗೆ ಅಷ್ಟು ಥ್ರಿಲ್ ಆಗ್ತಿದೆಯಾ ಎಂದು ಕಣ್ಣರಳಿಸಿದ್ದಳು ಎಂದೇ  ನಾಗವೇಣಿಗೆ ಅನ್ನಿಸುತ್ತಿದೆ. ಓಕಳಿಪುರದಲ್ಲೂ ನಿಧಾನವಾಗಿಯಾದ್ರೂ ಸರಿ, ಆರಾಮಾಗಿ  ಚಲಾಯಿಸಬಹುದು ಮುದ್ದು ಸ್ಕೂಟೀನ ಎಂಬುದು ನಾಗವೇಣಿಗೆ ತುಂಬಾ ಸಂತೋಷ ಕೊಡೋ ವಿಚಾರವಾಗಿತ್ತು. ಆನಂದರಾವ್ ಸರ್ಕಲ್ಲಿನ ಫ್ಲೈ ಓವರ್ ಹತ್ತುವಾಗ ಎಡಕ್ಕೆ ಡೀವಿಯೇಶನ್ ತೆಗೆದುಕೊಳ್ಳುವ ಬಸ್ಸುಗಳೇ ವಿಪರೀತವಾಗಿ ಫ್ಲೈಓವರ್ ರಗಳೆ ಹೆಚ್ಚಾಯಿತು ಎಂದು ನಾಗವೇಣಿಗೆ ಅನ್ನಿಸುತ್ತದೆ. ಆದರೆ ಅಲ್ಲೂ ಒಂದು ಇಳಿರಸ್ತೆಯನ್ನು ಕಟ್ಟುತ್ತಿರೋದು ಒಳ್ಳೇದೇ. ಅದು ಮುಗಿದ ಮೇಲೆ ಈ ರಶ್ ಕಡಿಮೆಯಾಗಬಹುದು… ಫ್ಲೈ ಓವರ್  ಮೇಲೆ ಹೋಗುವಗ ದೊಡ್ಡ ಮರಗಳ ಎಲೆಗಳು ಹೇಗೆ ಹರಡಿಕೊಂಡಿವೆ.. ಇತ್ತ ರೇಸ್‌ಕೋರ್ಸ್ ಎಂಥದ್ದೋ ಆರ್ಮಿಕ್ಯಾಂಪ್ ಥರ ಕಾಣಿಸುತ್ತದೆ. ಭಾನುವಾರ ಇಲ್ಲಿ ರೇಸ್ ನೋಡಲಿಕ್ಕೇ ಜನ ಫ್ಲೈ ಓವರ್ ಹತ್ತುತ್ತಾರೆ ಎಂದು ನಾಗವೇಣಿ ನಿಧಾನವಾಗಿ ಇಳಿಯುತ್ತಿದ್ದಂತೆ, ಅವಳ ಬಲ ನೆಲರಸ್ತೆಯೂ ಕೂಡಿಕೊಂಡು ಮತ್ತೆ  ಟ್ರಾಫಿಕ್ ಹೆಚ್ಚಾಯಿತು.
ರಾಂಗ್ ನಾಥ್ ಅಂದ್ರೆ ರಂಗನಾಥ್ ಅಂತ ನನಗೆ ಮಾತ್ರ ಗೊತ್ತಲ್ವ ಎಂದು ನಾಗವೇಣಿ ಮತ್ತೆ ಮತ್ತೆ ತನಗೆ  ತಾನೇ ಹೇಳಿಕೊಂಡು ಬೆಚ್ಚಗೆ ನಕ್ಕಿದ್ದಾಳೆ. ಹಾಗೆ ನೋಡಿದರೆ ರಾಂಗ್ ನಾಥ್ ನಿಜ ಹೆಸರು ರಂಗನಾಥ್. ಅವರು ಯಾವತ್ತೂ ರಾಂಗ್ ಆದವರೇ ಅಲ್ಲ.  ಎಂಥ ಜೀನಿಯಸ್… ಗಣಿತ, ಭೌತಶಾಸ್ತ್ರ, ಫಿಲಾಸಫಿ, ಬ್ಯಾಂಕಿಂಗ್, ಶೇರು ಮಾರುಕಟ್ಟೆ… ಎಲ್ಲವೂ ಅವರಿಗೆ ಕರತಲಾಮಲಕ. ಅವರ ಕನ್ನಡ ವಿಮರ್ಶೆಗಳೂ  ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಿಂದೆ ಕಸ್ತೂರಿಯಲ್ಲೂ ಅವರು ಲೇಖನಗಳನ್ನು ಬರೆದಿದ್ದಾರಂತೆ… ಈ ಸ್ಕೂಟರ್‌ನವನು ಯಾಕೆ ನನ್ನನ್ನೇ ಫಾಲೋ ಮಾಡ್ತಿದಾನೆ ಎಂದು ನಾಗವೇಣಿ ಹೆಲ್ಮೆಟ್‌ನಿಂದಲೇ ಇಣುಕುತ್ತಿದ್ದಂತೆ ಅವನೂ ಭರ್ರೆಂದು ಹೊರಟೆಹೋದ. ಎಡಬಲಗಳಲ್ಲಿ ಕಾರುಗಳು, ಸಿಟಿಬಸ್ಸುಗಳು, ಬೈಕ್‌ಗಳು ರೊಯ್ಯರೊಯ್ಯನೆ ಹೋಗುತ್ತಿದ್ದಂತೆ ನಾಗವೇಣಿ ನಾಜೂಕಾಗಿ ಮಹಾರಾಣಿ ಕಾಲೇಜಿನ ಬದಿಗೆ ಸ್ಕೂಟಿಯನ್ನು ಹಾಯಿಸಿಕೊಂಡು ತಂದು ನಿಲ್ಲಿಸಿ ಮೊಬೈಲ್ ಎತ್ತಿಕೊಂಡಳು.
ಮೊದಲು  ರಾಂಗ್‌ನಾಥ್. ಬಹುಶಃ ಇವತ್ತು ಅವರು ಆಫೀಸಿನಲ್ಲೇ ಇರಬೇಕು. ಕೂಡಲೇ ಫೋನ್ ಎತ್ತಿಕೊಂಡು `ಅಮ್ಮಾ ನಾಗವೇಣಿ, ನೀನು ಫೋನ್ ಮಾಡಿದ್ದು ಮೀಟಿಂಗ್ ಕ್ಯಾನ್ಸೆಲ್ ಮಾಡೋದಕ್ಕೆ ಅಲ್ಲ ತಾನೆ?’ ಎಂದುಬಿಟ್ಟರು. ನಾಗವೇಣಿಗೆ ಸಿಟ್ಟೇ ಬಂತು. `ಸರ್, ನಾನು ಫೋನ್ ಮಾಡಿದ್ದು ಮೀಟಿಂಗ್ ಕನ್‌ಫರ್ಮ್ ಮಾಡ್ಕೋಳ್ಳೋದಕ್ಕೆ.. ಯಾಕೆ ಸುಮ್ನೆ ನನ್ನ ಗೋಳು ಹೊಯ್ಕೋತೀರ?’ ಎಂದು ಬೈದೇಬಿಟ್ಟಳು. ಇಂಥ ಜಗಳಗಳೆಲ್ಲ ನಾಗವೇಣಿಯಿಂದ ನಿರೀಕ್ಷಿತ ಎಂಬಂತೆ  ರಾಂಗ್‌ನಾಥ್ ನಗತೊಡಗಿದರು. ಆ ಟ್ರಾಫಿಕ್ ಗಲಾಟೆಯಲ್ಲೂ ಅವರ ನಗು ಎಷ್ಟು ಛಂದ ಕೇಳಿಸುತ್ತಿದೆ ಎನಿಸಿ  ನಾಗವೇಣಿ ವೆಹಿಕ್ಯುಲಾರ್ ಪೊಲುಶನ್‌ನಲ್ಲೂ ವಿಚಿತ್ರ ಆಹ್ಲಾದಕತೆಯನ್ನು ಅನುಭವಿಸತೊಡಗಿದಳು. ಆಮೇಲೆ ಅವಳು ತನ್ನ ಕಚೇರಿಗೆ ಫೋನ್ ಮಾಡಿ ಯಾರಾದರೂ ತನ್ನನ್ನು ಸಂಪರ್ಕಿಸಿದ್ದಾರೆಯೇ ಎಂದು  ವಿಚಾರಿಸಿಕೊಂಡಳು.  ಅಂಥ ಒಬ್ಬಿಬ್ಬರು ಜನರ ಕಾಂಟಾಕ್ಟ್  ನಂಬರುಗಳನ್ನು ನೋಟ್  ಮಾಡಿಕೊಂಡಳು.  ಮತ್ತೆ  ತನ್ನ ಶರ್ಟನ್ನು ಕೆಳಗೆ ಎಳೆದುಕೊಂಡು ಸ್ಕೂಟಿಯನ್ನು ಏರಿ ಕೋರಮಂಗಲದತ್ತ ಸವಾರಿ ಮಾಡಿದಳು. ಅವಳಿಗೆ  ಅಲ್ಲಿನ ಪ್ರತಿಷ್ಠಿತ ಮಧ್ಯಮ ಸ್ತರದ  ಸಾಫ್ಟ್‌ವೇರ್ ಸಂಸ್ಥೆಯವರು ಹೊಸ ಕಾರ್ಪೋರೇಟ್ ಐಡೆಂಟಿಟಿಗಾಗಿ ಮೀಟಿಂಗ್ ಕರೆದಿದ್ದಾರೆ. ಅಲ್ಲಿಂದ  ಸೀದಾ ಜಯನಗರಕ್ಕೆ  ಹೋಗಿ ತಮ್ಮನಿಗೆ  ಒಂದೆರಡು ಶೇರ್ವಾನಿ ಖರೀದಿಸಿ ದಾವಣಗೆರೆಗೆ ಕಳಿಸಬೇಕು. ಅವನ ಮದುವೆಗೆ ಎಲ್ಲಾ ತಯಾರಿ ನಡೆಯುತ್ತಿದ್ದರೂ ತಾನು ಮಾತ್ರ ಇಲ್ಲಿ  ಊರಿಗೆ ಬಿಟ್ಟ ಹೋರಿಯ ಹಾಗೆ ಯಾವುದೇ ಜವಾಬ್ದಾರಿ ಇಲ್ಲದೆ ಓಡಾಡಿಕೊಂಡಿದ್ದೇನೆ…
ಮೀಟಿಂಗ್‌ನಲ್ಲಿ ಅಂಥಾದ್ದೇನೂ ನಡೆಯಲಿಲ್ಲ. ತನ್ನ ಪ್ರೆಸೆಂಟೇಶನ್‌ನನ್ನೇ ಎಲ್ಲರೂ ಯಥಾವತ್ತಾಗಿ ಒಪ್ಪಿಕೊಂಡರು. ಫ್ಲೈ ಓವರ್‌ಗಳ ನಗರವಾಗ್ತಾ ಇರೋ ಬೆಂಗಳೂರಿನಲ್ಲಿ ಅಂಥ ಫ್ರೀ ಸ್ಟೋಕ್ಸ್ ಇರೋ ಲೋಗೋಗಳನ್ನು ಇವರು ಒಪ್ಪದೆ ಎಲ್ಲಿ ಹೋಗ್ತಾರೆ…. ಇವರಿಗೆ ಮಾತ್ರ ಯಾಕೆ.. ಎಲ್ಲ ಸಾಫ್ಟ್‌ವೇರ್ ಸಂಸ್ಥೆಗಳಿಗೂ ಒಂದು ಗ್ಲೋಬ್ ಬೇಕು.. ಅದರ ಸುತ್ತ ಮುತ್ತ ಚಕ್ರಾಕಾರದಲ್ಲಿ ಗೆರೆಗಳನ್ನು ಹಾಯಿಸಬೇಕು….. ಅಷ್ಟೆ. ಪ್ರೊಪೋಸಲ್ ಓಕೇ ಆಗುತ್ತದೆ. ಉಳಿದದ್ದೆಲ್ಲ ಸಿಂಪಲ್. ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡಿನಿಂದ ಹಿಡಿದು ಹೋರ್ಡಿಂಗ್, ಅಪಾಯಿಂಟ್‌ಮೆಂಟ್ ಜಾಹೀರಾತುವರೆಗೆ ಇದೇ ಚಿತ್ರಗಳನ್ನೇ ತರಾವರಿ ಒತ್ತಿದರಾಯ್ತು… ಬಿಲ್ಲು ರೆಡಿ.. ತರ್‍ಲೆಗಳು ಇರ್‍ದೇ ಹೋದ್ರೆ ಮೂರು ತಿಂಗಳುಗಳಲ್ಲಿ ಐವತ್ತು ಸಾವಿರ ಲಾಭಕ್ಕೆ ಮೋಸವಿಲ್ಲ ಎಂದು ನಾಗವೇಣಿ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತ ಆಫೀಸಿನತ್ತ ನಡೆದಳು.
ಅವಳು ಆಫೀಸಿನಲ್ಲಿ ಎಲ್ಲ ಕಲಾವಿದರನ್ನು ಕರೆದು ಬ್ರೀಫ್ ಮಾಡಿದಳು. ಅವರಿಗೆ ಚಾ ಬಿಸ್ಕೀಟು ತರಿಸಿ ಖುಷಿ ಮಾಡಿದಳು. ಅವರೆದುರಿಗೆ ಒಂದು ಗಝಲ್ ತುಣುಕು ಹಾಡಿ ವಾಹ್‌ವಾಹ್ ಅನ್ನಿಸಿಕೊಂಡಳು. ಅವಳಿಗೂ ಬ್ಯುಸಿನೆಸ್ ಹೊರತಾಗಿ ಒಂದು ಹೃದಯವಿದೆ ಅನ್ನೋದು ಅಲ್ಲಿರೋ ಸಬ್‌ಸ್ಟಾಫಿಗೂ ಗೊತ್ತಾಗಿ ಆತನೂ ಒಮ್ಮೆ ತಬಲಾ ತಂದುಬಿಟ್ಟಿದ್ದ. ಇಬ್ಬರೂ ಸೇರಿ ಆ ಶುಕ್ರವಾರ ಗಝಲ್ ಪಾರ್ಟಿ ಮಾಡಿದ್ದರು. ಕಲಾವಿದ ರಮಾನಾಥ ಅವತ್ತು ಎಲ್ಲರನ್ನೂ ಡಿಜಿಟಲ್‌ಕ್ಯಾಮೆರಾದಲ್ಲಿ ಹಿಡಿದಿಟ್ಟಿದ್ದ. ಅದನ್ನೆಲ್ಲ ಶೋಧಿಸಿ, ಒಳ್ಳೇ ಫೋಟೋಗಳನ್ನು ತಮ್ಮ ವೆಬ್‌ಸೈಟಿನಲ್ಲಿ ಹಾಕಿದಾಗ ಎಂಥ ಒಳ್ಳೇ ರೆಸ್ಪಾನ್ಸ್ ಬಂದಿತ್ತು…. ನಾಗವೇಣಿ ಮೀಟಿಂಗ್‌ನಲ್ಲಿ ಮತ್ತೆ  ಮತ್ತೆ ಹಳೆ ನೆನಪುಗಳಿಗೆ ಜೋತುಬೀಳುತ್ತ ಹೋದರೂ ಅಜೆಂಡಾ ಮುಗಿಸಿಯೇ ಮೇಲೆದ್ದಳು. ನಾಲ್ಕು ಲಕ್ಷ ರೂಪಾಯಿಗಳ ಆರ್ಡರ್ ಸಿಕ್ಕಿದ ಮೇಲೆ ನಾವೆಲ್ಲ ಹ್ಯಾಗೆ ಬಿಹೇವ್ ಮಾಡಬೇಕು ಎಂದು ಅವಳು ಸಂಜೆ ಮತ್ತೆ ಮೀಟಿಂಗ್ ಕರೆದು ಹೇಳುವವಳಿದ್ದಾಳೆ.
ಅವಳು ಆಮೇಲೆ ಇನ್ನೊಂದಿಷ್ಟು ಕ್ಲೈಂಟ್‌ಗಳಿಗೆ ಕರೆ ಮಾಡಿ ತನ್ನ ಸೇವೆಯ ಕರಾರು ಎಷ್ಟು ಕರಾರುವಾಕ್ಕಾಗಿ ನಡೆಯುತ್ತಿದೆ, ಎಲ್ಲ ಆರ್ಡರ್‌ಗಳ್ನೂ ಸಮಯಕ್ಕೆ ಸರಿಯಾಗಿ  ಡೆಲಿವರಿ ಮಾಡಲಾಗಿದೆ ಎಂದೋ, ಮುಂದಿನ ಬ್ರೋಶರಿನ ವಿನ್ಯಾಸವನ್ನು ಬದಲಿಸಿ, ಮಾಹಿತಿಯನ್ನು ಅಪ್‌ಡೇಟ್ ಮಾಡುವೆ ಎಂದೋ, ಈ ವಾರವೇ ಅವರ ಕಚೇರಿಗೇ ಬಂದು ಎಲ್ಲ ಹೊಸ ಕೆಲಸಗಳ ಪಟ್ಟಿ ತೆಗೆದುಕೊಳ್ಳುವೆ ಎಂದೋ… ಸುಮಾರು ಹದಿನಾರು ಕರೆಗಳನ್ನು ಮಾಡಿದ ಮೇಲೆ ನಾಗವೇಣಿ ಸುತ್ತಾಗಿ ಹಾಗೇ ಕಣ್ಣು ಮುಚ್ಚಿ ಯೋಚಿಸತೊಡಗಿದಳು. ಅವಳ ಆ ಕಪ್ಪು ಗಾಜಿನ ಚೇಂಬರಿನ ಹೊರಗೆ ಅವಳ ಚಹರೆ ಯಾರಿಗೂ ಕಾಣುವುದಿಲ್ಲ. ಅವಳು ಬಾಗಿಲಿಗೆ ಬೋಲ್ಟ್  ಹಾಕಿಕೊಳ್ಳುವುದೂ ಇದೆ. ಆದ್ದರಿಂದ ಅವಳು ಕಚೇರಿಯಲ್ಲೂ ತನ್ನದೇ ಆದ ಜಗತ್ತನ್ನು ಹೀರಿಕೊಳ್ಳುತ್ತಾಳೆ. ಬೋರಾದರೆ ಟಿವಿ  ಹಾಕುತ್ತಾಳೆ. ಡಿವಿಡಿ ಪ್ಲೇಯರಿನಲ್ಲಿ ಗಜಲ್  ಹಾಕುತ್ತಾಳೆ. ಅಥವಾ ಯಾವುದೋ ಪೋಲಿ ಸಿನೆಮiವನ್ನೂ ನೋಡದರೂ ಸರಿಯೆ ಎಂಬ ಜಾಯಮಾನ ನಗವೇಣಿಯದು.  ಕೆಲವೊಮ್ಮೆ  ಅನಾಮಧೇಯ ಹುಡುಗರ ಜೊತೆಗೆ ಐಸಿಕ್ಯೂ ಮೂಲಕ ಚಾಟ್ ಮಾಡುತ್ತ ತನ್ನೆಲ್ಲ ದುಃಖ ದುಮ್ಮಾನವನ್ನು  ಹೇಳಿಕೊಳ್ಳುವುದು, ರಿಡಿಫ್ ಬೋಲ್‌ಮೂಲಕ ಗೆಳೆಯರಿಗೆ ಎಸ್ ಎಂಎಸ್ ಕಳಿಸುವುದು, ಸ್ಕೈಪ್ ಮೂಲಕ ಅಮೇರಿಕಾದ ಹುಡುಗನ ಜೊತೆ ಸುಮ್ಮನೆ ಭಾವನೆಗಳನ್ನು ಕೊಚ್ಚುವುದು,  – ಎಲ್ಲವೂ ನಾಗವೇಣಿಗೆ ತುಂಬಾ  ಇಷ್ಟ.
ಆರೂವರೆ ಆಗೇ ಹೋಯ್ತು ಎಂದು ಎದ್ದ ನಾಗವೇಣಿ ಬಾತ್‌ರೂಮಿಗೆ ಹೋಗಿ ತಲೆ ಬಾಚಿಕೊಂಡಳು. ಮೂವತ್ತರ ಈ ಹರೆಯದಲ್ಲೂ ನಾನು ಎಷ್ಟು ಚೆನ್ನಾಗಿ ಕೂದಲನ್ನು ಆರೈಕೆ ಮಾಡಿಕೊಂಡಿದ್ದೇನೆ… ಈ ದೇಹವನ್ನು ಹೇಗೆ ನಾಜೂಕಾಗಿ ಇಟ್ಟುಕೊಂಡಿದ್ದೇನೆ….  ಈ ಸಲ ರಾಂಗ್‌ನಾಥ್ ಏನಾದ್ರೂ ಮುಂದುವರಿದ್ರೆ.. ಮುಂದುವರಿಯೋದೇನು… ನಾನೇ ಮುಂದುವರೀಬೇಕಷ್ಟೆ… ನಾಗವೇಣಿ ಮತ್ತೆ ಮತ್ತೆ ತನ್ನ ಮುಖವನ್ನೇ ನೋಡಿಕೊಂಡಳು.  ವೇಲ್‌ನ್ನು ಛಂದ ಮಾಡಿ ಹೊದಿಸಿಕೊಂಡು ಹೊರಗೆ ಬಂದರೆ ಎಲ್ಲರೂ ಮನೆಗೆ ಹೊರಡಲು ತಯಾರಿ ನಡೆಸಿದ್ದಾರೆ.  ಗ್ರಾಫಿಕ್ ಡಿಸೈನರ್ ಗುರುಸ್ವಾಮಿ ನಾಳೆ ಬರಲ್ಲ. 
ನಾಗವೇಣಿ  ನಿಧಾನವಾಗಿ ಬ್ಯಾಗನ್ನು ತೆಗೆದುಕೊಂಡು ಬೇಸ್‌ಮೆಂಟ್‌ಗೆ ಬಂದು ಸ್ಕೂಟಿಯನ್ನು ಹೊರಗೆ ತರುತ್ತಿದ್ದ ಹಾಗೆಯೇ ಮಳೆಹನಿಗಳು ಬೀಳತೊಡಗಿದವು. ಕಾರು ಬೇಡ ಅಂದುಕೊಂಡಾಗೆಲ್ಲ ಹೀಗೆ ಮಳೆ ಬಂದು ಕಾಡುತ್ತದೆ ಎಂದು ನಾಗವೇಣಿ ತನ್ನೊಳಗೇ ಮುನಿಸಿಕೊಳ್ಳುತ್ತ… ಏನೇ ಆಗಲಿ, ಇವತ್ತು ಸ್ಕೂಟಿಯಲ್ಲೇ ಬೌರಿಂಗ್‌ಗೆ ಹೋಗುತ್ತೇನೆ ಎಂದು ಹೊರಬಿದ್ದಳು. ಗಾರ್ಡುಗಳು ಅವಳಿಗೆ ಒಂದು ಪುಗಸಟ್ಟೆ ಸಲಾಮು ಹೊಡೆದರು. ಟ್ರಾಫಿಕ್ ಪೊಲೀಸ್ ಪೇದೆ ಸುಮ್ಮನೆ ನಕ್ಕ. ಎಲ್ಲರೂ ಪರಿಚಿತರೇ. ಎಲ್ಲರ ಜೊತೆಗೂ ಒಂದೊಂದು ದಿನ ಪಾರ್ಟಿ ಮಾಡಬೇಕು ಎಂದು ನಾಗವೇಣಿ ಅಂದುಕೊಳ್ಳುತ್ತಿದ್ದಂತೆ  ಹಸಿರು ದೀಪ ಹೊತ್ತಿಕೊಂಡು ಹಿಂದಿನವರೆಲ್ಲ ಬೀಪ್ ಬೀಪ್ ಎಂದು ಸಮೂಹ ಆಕ್ರಂದನ ಆರಂಭಿಸಿದರು. ನಾಗವೇಣಿ ಥತ್ ಎಂದುಕೊಂಡು ಸೀದಾ ರೆಸಿಡೆನ್ಸಿ ರಸ್ತೆಯತ್ತ ಸ್ಕೂಟಿಯನ್ನು ಓಡಿಸಿದಳು. ಈ ಒನ್‌ವೇಗಳ ಕಾಟದಲ್ಲಿ ಎದುರಿಂದ ವಾಹನಗಳು ಬರದೇ ಇರೋದೇ ಒಂದು ದೊಡ್ಡ ಅನುಕೂಲವೂ ಆಗಿದೆ ಎಂದು ಅವಳಿಗೆ ಯಾವಾಗಲೂ ಅನ್ನಿಸಿದ್ದಿದೆ.  ಯಾರಾದರೂ ಬಂದು ಸೀದಾ ಎದೆಯನ್ನೇ ಸೀಳಿಕೊಂಡು ನೋಡುವುದನ್ನು ಅವಳು ಸಹಿಸಿಕೊಂಡು ಹತ್ತು ವರ್ಷಗಳಾದವು. ಈ ಟ್ರಾಫಿಕ್ ಸೆಕ್ಸ್ ಎನ್ನುವುದಕ್ಕೆ ಮಾನಸಿಕ ತಜ್ಞರು ಯಾವುದಾದರೂ ವ್ಯಾಖ್ಯೆ  ನೀಡಿದ್ದಾರೆಯೆ ಎಂದು ನಾಗವೇಣಿ ಎಷ್ಟೋ ಸಲ ಯೋಚಿಸಿದ್ದಿದೆ. ಈ ಸಲವೂ ಅವಳು ಕ್ಯಾಶ್ ಫಾರ್ಮಸಿ  ದಾಟುವ ಹೊತ್ತಿಗೆ ಮತ್ತೆ  ಟ್ರಾಫಿಕ್ ಸೆಕ್ಸ್ ಯೋಚನೆ ಭಗ್ಗನೆ ಹೊತ್ತಿಕೊಂಡಿತು. ಹಾಗಾದರೆ ತನಗೂ ಈ ನೋಟ ಇಷ್ಟವಾಗಿತ್ತಲ್ಲವೆ…. ತನ್ನ ಎದೆಯನ್ನು ಎಲ್ಲರೂ ಹೀಗೆ ಬಗೆಬಗದು ನೋಡುವುದು ತನಗೂ ವೋಯೆರಿಸಮ್‌ನ ಪಾಠ ಕಲಿಸಿತ್ತಲ್ಲವೆ… ಅರೆ ಈ ಫೋರ್ಡ್ ಐಕನ್ ಕಾರು ಎಷ್ಟು ವೇಗವಾಗಿ ಬರುತ್ತಿದ.. ಎಡಕ್ಕೂ ಸರಿಯುವ ಹಾಗಿಲ್ಲ…. ಆಟೋದವ  ಅಲ್ಲೇ ವಕ್ಕರಿಸಿದ್ದಾನೆ ಎಂದು ನಾಗವೇಣಿ ಮತ್ತೆ ಮತ್ತೆ ಆಚೀಚೆ ನೋಡುತ್ತ ಬಲಕ್ಕಿದ್ದ ಇನ್ನೊಂದು ಒನ್‌ವೇಯಲ್ಲಿ ಸ್ಕೂಟಿಯನ್ನು ಹಾಯಿಸಿದಳು. ಅಲ್ಲಿಂದ ಬೌರಿಂಗ್ ಮಾರುದೂರದಲ್ಲೇ ಇದೆ. ಅದಕ್ಕೂ ಇಲ್ಲೇ ಸ್ಕೂಟಿಯನ್ನು ಪಾರ್ಕ್ ಮಾಡಿ ಹೋಗಬೇಕು ಎಂದು ಚಡಪಡಿಸುತ್ತ ನಾಗವೇಣಿ  ನಿಂತಿದ್ದಂತೆ ಬಲಗಡೆ ಯಾರೋ ಹಾಯ್ ನಗೂ ಎಂದು ಕರೆದಂತಾಯಿತು.
ಅರೆ, ರಮೇಶ ಯಾಕೆ ನನ್ನನ್ನು ಹಾಗೆ ನೋಡುತ್ತಿದ್ದಾನೆ…. ನನ್ನ ಬ್ಯಾಚ್‌ಮೇಟ್… ಎಷ್ಟೋ ಸಲ ಅವನ ಜೊತೆಗೆ ಪಿಕ್‌ನಿಕ್ ಹೋಗಿದ್ದಿದೆ… ಅವನ ಜೊತೆ ಫ್ಲರ್ಟ್ ಮಾಡಿಬಿಟ್ಟೆ ಎಂದು ಅನ್ನಿಸಿದ್ದೂ ಇದೆ. ಹುಡುಗಿಯರೂ ಫ್ಲರ್ಟ್ ಮಾಡುತ್ತಾರೆ ಎಂಬ ಕಲ್ಪನೆಯನ್ನು ಹುಟ್ಟಿಸಿದ್ದೇ ಇವನು.
ರಮೇಶ ತನ್ನ ಹೊಸ ಬೈಕನ್ನು ನಿಲ್ಲಿಸಿ `ಅರೆ, ಏನೇ ಇಲ್ಲಿದೀಯ..? ಎಲ್ಲಿಗೆ ? ಕೋಶೀಸ್‌ಗಾ?’ ಎಂದ.  ನಾಗವೇಣಿ ತಲೆಗೂದಲನ್ನು ಮತ್ತೆ ಮತ್ತೆ ಹಿಂದಕ್ಕೆ ಎಳೆದುಕೊಳ್ಳುತ್ತ `ಹಾಯ್ ರಮೇಶ್… ಯಾಕೋ ಕೋಶೀಸ್‌ಗೆ ಹೋಗ್ತೀನಿ….  ನಂಗೇನಾಗಿದೆ… ಇಲ್ಲೇ ಬೌರಿಂಗ್‌ಗೆ ಹೋಗಬೇಕಿತ್ತು.. ಯಾವುದೋ ಕಾರ್ಪೋರೇಟ್ ಮೀಟಿಂಗ್’ ಎಂದಳು.
ಹಾಗೇ ಮಾತುಕತೆ ಬೆಳೆಯುತ್ತಿದ್ದಂತೆ ರಮೇಶನೂ ಹಗುರಾದ. ನಾಗವೇಣಿಯೂ ಇನ್ನೂ ಟೈಮ್ ಇದೆಯಲ್ಲ ಎಂದು ಮತ್ತೆ ಮತ್ತೆ ಮಾತನ್ನು ಕೆದಕಿ ಕೆದಕಿ ಅವನ ಜೊತೆ ಹರಟಿದಳು. ಇಬ್ಬರೂ ಪಾರ್ಕಿಂಗ್ ಏರಿಯಾದಲ್ಲೇ ಹಾಗೆ ನಿಂತು ಮಾತಾಡುವುದನ್ನು ನೋಡಿದರೆ ಯಾರೋ ಲವರ್‍ಸ್ ಗುಡ್‌ಬೈ ಹೇಳಲಾಗದೆ ಮಾತನಾಡುತ್ತಿದ್ದಾರೆ ಎಂಬಂತೆ ಕಾಣಿಸುತ್ತಿತ್ತು.  ಹಾಗಂತ ನಾಗವೇಣಿಗೂ ಅನ್ನಿಸಿತೇನೋ.. `ಸರಿ ಕಣೋ ಯಾವಾಗಲಾದರೂ ಸಿಗೋಣ’ ಎಂದು ತನ್ನ ಕಾರ್ಡ್ ನೀಡಿದಳು. ರಮೇಶ ಈಗ ದೊಡ್ಡ ಎಲೆಕ್ಟ್ರಿಕ್ ಕಂಟ್ರಾಕ್ಟರ್‌ಆಗಿದಾನೆ. ಸಾಕಷ್ಟು ಹಣ ಮಾಡಿರಬೇಕು. ಸುಮ್ನೆ ಚೈನಿ ಹೊಡೆಯೋದಕ್ಕೆ ಬೈಕ್ ತಂದಿದಾನೆ ಅನ್ನೋದು ನಾಗವೇಣಿಗೆ ಚೆನ್ನಾಗಿ ಗೊತ್ತಿತ್ತು.
ರಮೇಶನನ್ನು ಹಾಗೆ ಸುಮ್ಮನೆ ಬೀಳ್ಕೊಡಬಾರದಾಗಿತ್ತು, ಸ್ವಲ್ಪ ಲಲ್ಲೆ ಹೊಡೆದೇಬಿಡಬೇಕಿತ್ತು ಎಂದು ನಾಗವೇಣಿಗೆ ಅನ್ನಿಸುವಾಗಲೇ ಅವಳು ಬೌರಿಂಗ್ ಹತ್ರ ಬಂದಿದ್ದಳು. ಆದರೆ ಒಳಹೋಗುವ ಬಾಗಿಲು ಮುಚ್ಚಿಬಿಟ್ಟಿದೆ. ಅಲ್ಲೇ ಇದ್ದ ಸೆಕ್ಯುರಿಟಿಯವನು `ಮೇಡಂ, ಆ ಕಡೆ ಎಕ್ಸಿಟ್ ಬಾಗ್ಲಿಂದ್ಲೇ ಹೋಗಿ.. ಇಲ್ಲಿ ರಿಪೇರಿ ನಡೆದಿದೆ  ಎಂದ.
ಕೋಶಿಸ್ ಪಕ್ಕದ ರಸ್ತೆಯಲ್ಲಿ ನಾಗವೇಣಿ ಸ್ಕೂಟಿಯನ್ನು ತಿರುಗಿಸಿ ಒಳಗೆ ಹೋದರೆ ಎಷ್ಟೋ ಕಾರುಗಳು ಅಲ್ಲಿದ್ದವು. ನೂರಾರು  ಬೈಕ್‌ಗಳು ಸಾಲುಸಾಲಾಗಿ ಇದ್ದದ್ದನ್ನು ನೋಡಿದ ಕೂಡಲೇ ನಾಗವೇಣಿಗೆ ಇದು ದೊಡ್ಡ ಕ್ಲಬ್ಬೇ  ಇರಬೇಕು ಅನ್ನಿಸಿತು. ದೊಡ್ಡ ದೊಡ್ಡ ಕುಟುಂಬಗಳ ಮಕ್ಕಳು ಇಲ್ಲಿದ್ದಾರೆ…. ಎಲ್ಲರದೂ ಮಾನೋಕಲ್ಚರ್ ಡ್ರೆಸ್…. ಒಂದೇ ಥರ ಬಣ್ಣ ಬಣ್ಣದ ಚಿಟ್ಟೆಗಳ ಥರ ಕಾಣಿಸ್ತಿದಾರೆ… ನಾನೂ ಹೀಗೆ ಫ್ಯಾಮಿಲಿ ಹೊಂದಿ ಇಲ್ಲಿ ಹೀಗೆ ಸ್ವಿಮ್ಮಿಂಗ್‌ಗೆ ಬರಬಹುದೇ ಎಂದು ನಾಗವೇಣಿ ಅಚ್ಚರಿಪಡುತ್ತ ಮೊಗಸಾಲೆಯಲ್ಲಿ ಎಲ್ಲರ ಮುಖ ನೋಡುತ್ತ ಅಡ್ಡಾಡಿದಳು.
ಅಲ್ಲೇ ಮೂಲೆಯ ಒಂದು ಮೇಜಿನ ಮೇಲೆ  ತಮ್ಮ ನೆಚ್ಚಿನ ಬ್ರಾಂಡ್ ಸಿಗರೇಟ್ ಪ್ಯಾಕನ್ನು ಸ್ಥಾಪಿಸಿ ಹೊಗೆ ಬಿಡುತ್ತಿದ್ದ ರಂಗನಾಥ್ ಕಾಣಿಸಿದರು. ದೂರದಿಂದಲೇ ಹಲೋ ಎಂದು ಮೆಲ್ಲಗೆ ಕೈ ಎತ್ತಿದ್ದಾರೆ. ಎಂಥ ಮೃದುಹೃದಯಿ ಈ ಮನುಷ್ಯ ಎಂದು ನಾಗವೇಣಿ ಅವರನ್ನು ಅಚ್ಚರಿಯಿಂದ ನೋಡುತ್ತಲೇ  ಅವರೆದುರಿನ ಸೋಫಾದಲ್ಲಿ ಕೂತಳು. ಹೊಟ್ಟೆ  ಬಂದವರಿಗೆಂದೇ ಮಾಡಿಸಿದಂತಿದ್ದ ಆ ಸೋಫಾದಲ್ಲಿ ನಾಗವೇಣಿ ಒಂದು ಚಿಕ್ಕ ದೇಹವಾಗಿ ಹೋಗಿದ್ದನ್ನು ನೋಡಿ ರಂಗನಾಥ್‌ಗೆ ನಗು ಬಂತು. `ಏನಮ್ಮ, ಈ ಥರ ತೆಳ್ಳಗೆ ಇದ್ರೆ ನಾಳೆ ನಾಡಿದ್ರಲ್ಲಿ ನೀನು ವ್ಯಾನಿಶ್ ಆಗಿಹೋಗ್ತೀಯ, ಏನಾದ್ರೂ ಮಾಡಿ ಸ್ವಲ್ಪ ದಪ್ಪಗಾಗು’ ಎಂದು ರಂಗನಾಥ್ ಛೇಡಿಸಿದರು.
ನಾಗವೇಣಿ ಅವರ ಮಾತಿಗೆ ನಸುನಗುತ್ತ ಅತ್ತ ಇತ್ತ ನೋಡಿದಳು. ಎಲ್ಲರೂ ತಂತಮ್ಮ ಬ್ಯುಸಿನೆಸ್ ಮಾತುಕತೆಗಳಲ್ಲಿ ಮಗ್ನರಾಗಿದ್ದಾರೆ. ಎಲ್ಲರ ಮಾತುಗಳೂ ಕೇಳಿಸುತ್ತಿದ್ದರೂ ಯಾವುದೂ ಕೇಳಿಸ್ತಾನೇ ಇಲ್ಲ ಎಂಬಂಥ ಸ್ಥಿತಿ. ಬ್ಯಾಗನ್ನು ಪಕ್ಕದಲ್ಲೇ ಚೆಲ್ಲಿದ ನಾಗವೇಣಿ `ಒಂದ್ನಿಮಿಷ ಇರಿ’ ಎಂದು ಟಾಯ್ಲೆಟ್ ಹುಡುಕಿಕೊಂಡು ಹೋದಳು. ಗಂಡಸರ ಜೊತೆ ಪಾರ್ಟಿ ಮಾಡುವಾಗ ಇದೊಂದು ಹೇಳಲಾಗದ, ಹೇಳದೇ ಇರಲಾಗದ ಸಮಸ್ಯೆ ಎಂಬುದು ನಾಗವೇಣಿಗೆ ಚೆನ್ನಾಗಿ ಗೊತ್ತಿದೆ.  ಅದಕ್ಕೇ ಅವಳು ಸಾಮಾನ್ಯವಾಗಿ ಒಂದ್ಸಲ ಫ್ರೆಶ್ ಆಗಿ ಬರ್‍ತೀನಿ,  ಕಣ್ಣಿನ  ತುಂಬಾ ಧೂಳು ತುಂಬ್ಕೊಂಡಿದೆ…  ಈಗ ಮುಗಿಸಿದ ಮೀಟಿಂಗ್‌ನಲ್ಲಿ ತಲೆಯೆಲ್ಲ ಹಾಳಾಗಿ ಹೋಯ್ತು…. ಹೀಗೆ  ಏನಾದ್ರೂ ಒಳ್ಳೆ ಸಬೂಬು ಹೇಳುವುದನ್ನು ಕಲಿತುಕೊಂಡಿದ್ದಾಳೆ.
ಲೇಡೀಸ್ ಟಾಯ್‌ಲೆಟ್‌ನ ಬಾಗಿಲಿನ ಮೇಲೆ `ಓನ್ಲಿ ಫಾರ್  ಮೆಂಬರ್ಸ್’ ಅಂತ ಬರೆದಿದ್ದನ್ನು ನೋಡಿ ವಿಸಿಟರ್‌ಗಳಿಗ ಬೇರೆ ಟಾಯ್‌ಲೆಟ್‌ಇದೆಯಾ ಎಂದು ಕೇಳಲೇ ಎಂದುಕೊಂಡರೂ ಕೊನೆಗೆ ಇದೆಲ್ಲ ಯಾಕೆ… ನಾನು ಮೆಂಬರ್ ಅಲ್ಲ ಅಂತ ಯಾರಿಗೆ ಗೊತ್ತು ಎಂದುಕೊಳ್ಳುತ್ತ ನಾಗವೇಣಿ ಫ್ರೆಶ್ ಆದಳು. ಮತ್ತೆ ಮುಖಕ್ಕೆ ತಣ್ಣಗೆ ಒಂದು ಸುವಾಸನೆಯ ಕ್ರೀಮ್ ಸವರಿಕೊಂಡು ಹೊರಗೆ ಬಂದಳು.
ರಂಗನಾಥ್ ಅದಾಗಲೇ ವಿಸ್ಕಿಯನ್ನು ತರಿಸಿಕೊಂಡಿದ್ದಾರೆ. ಅವರ ಮೆಚ್ಚಿನ ಅಂಬೊಡೆ ಕೂಡಾ ಬಂದಿದೆ. ತನಗಾಗಿ ಗೋಲ್ಕೊಂಡ ವೈನ್ ತರಿಸಿದ್ದಾರೆ. ಇಡೀ ಬಾಟಲಿಯನ್ನೇ ಏರಿಸುವುದಕ್ಕೆ ಸಂಕೋಚವಾಗುತ್ತೆ.ಹಾಗಂತ ನಾಗವೇಣಿ ಇಷ್ಟು ಪ್ರಮಾಣದ ವೈನ್ ಕುಡಿದೇ ಇಲ್ಲ ಎಂದಲ್ಲ. ರಂಗನಾಥ್ ಎದುರಿಗೆ ಹೀಗೆ ಎಂದೂ ಕುಡಿದಿಲ್ಲ.
`ನಿನ್ನ ಚಾಯ್ಸ್ ಇಲ್ಲಿದೆ’ ಎಂದು ರಂಗನಾಥ್ ನಗುತ್ತ ಮಾತಿಗೆ ಕೂತರು. `ನೋಡು, ನೀನೇ ತಡವಾಗಿ ಬಂದಿದೀಯ.. ಅದಕ್ಕೆ ನೀನೇ ಬಿಲ್ ಕೊಡಬೇಕು… ಹಾಗಂತ ಇಲ್ಲಿ ಯಾವುದೂ ದುಬಾರಿಯಲ್ಲ, ಎಲ್ಲವೂ  ತುಂಬಾ ಆಗ್ಗ. ನಿಂಗೆ ಭಾರ ಆಗಲ್ಲ. ಹಾಗೆ ಆಗೋದಿದ್ರೆ ನಾನೇ ಕೊಡ್ತೀನಿ’ ರಂಗನಾಥ್ ವಿಸ್ಕಿಯನ್ನು ಬಗ್ಗಿಸಿಕೊಂಡು  ಹಠಾತ್ತನೆ ಮೇಲೆತ್ತಿ `ಚಿಯರ್ಸ್’ ಎಂದರು.
ನಾಗವೇಣಿ ಅಷ್ಟುಹೊತ್ತಿಗೆ ವೈನನ್ನು ಉದ್ದ ಗಾಜಿನ ಲೋಟಕ್ಕೆ ಎರೆದುಕೊಂಡಿದ್ದಳು. ಅವಳೂ ಚಿಯರ್ಸ್ ಎಂದು ವೈನನ್ನು ಗಂಟಲಿಗೆ ಹಾಯಿಸಿಕೊಂಡಳು. ಎಷ್ಟೋ ದಿನಗಳ ಮೇಲೆ  ಹೀಗೆ ಕೂತಿದ್ದೇನೆ. ಹೊರಗೆ  ಅಂಗಳದಲ್ಲಿ  ಮಳೆ ಜಿನುಗುತ್ತಿದೆ. ಈ ರಂಗನಾಥ್ ಯಾಕೆ ನನ್ನನ್ನು ಇಷ್ಟೆಲ್ಲ ಪ್ರೀತಿಸ್ತಾರೆ… ಅವರಿಗೆ ಯಾಕೆ ನನ್ನ ಬ್ಯುಸಿನೆಸ್ ಬಗ್ಗೆ ಸಲಹೆಗಳನ್ನು ಕೊಡಬೇಕು ಅನ್ನಿಸುತ್ತೆ….
`ನಾಗವೇಣಿ, ನೀನು ಬ್ಯುಸಿನೆಸ್  ಇಂಪ್ರೂವ್ ಮಾಡ್ಕೋಬೇಕು ಅಂದ್ರೆ ನಿನ್ನ ಡ್ರೆಸ್‌ಕೋಡನ್ನ ಇನ್ನೂ ಸುಧಾರಿಸಿಕೋಬೇಕಮ್ಮ…  ಇದು ಸಾಲದು…. ಕಾಸ್ಮೋ ಕಲ್ಚರಿಗೆ ಹೊಂದುತ್ತೇನೋ ನಿಜ. ಆದ್ರೆ ಬೆಂಗಳೂರಲ್ಲಿ  ನಿನಗೆ ಸಖತ್ತಾಗಿ ಕ್ಲೈಂಟ್ ಸಿಗಬೇಕು ಅಂದ್ರೆ ನೀನು ಇನ್ನೂ ಕಾಸ್ಮೋ ಆಗಬೇಕು ಅನ್ಸುತ್ತೆ’  ರಂಗನಾಥ್ ಯಾವತ್ತೂ ಹೀಗೆ.  ಎಗ್ಗಿಲ್ಲದೆ ಮಾತನಾಡುತ್ತಾರೆ. ನನ್ನ ಬ್ಯೂಟಿಯನ್ನು  ಯಾವುದೇ ರಂಗಿಲ್ಲದೆ  ಹೊಗಳುತ್ತಾರೆ. ಯಾವ ಹಿತಾಸಕ್ತಿಯೂ ಇಲ್ಲದೆ  ಬೈತಾರೆ.
`ನೋಡು, ನಾಳೇನೇ ನೀನು ಗರುಡ ಮಾಲ್‌ಗೆ ಹೋಗು… ಅಲ್ಲಿ ಬೇಕಾದಷ್ಟು ಒಳ್ಳೆ ಡ್ರೆಸ್ ಮೆಟೀರಿಯಲ್ಸ್ ಸಿಗುತ್ತೆ… ಮೊನ್ನೆ ನಾನು ಸುಮ್ನೆ ಅಲ್ಲಿಗೆ ಹೋಗಿದ್ದೆ… ಮಗ ಕೇಳ್ತಾ ಇದ್ದ…. ನಿನಗೆ ಹೇಳಿ ಮಾಡಿಸಿದ ಜಾಗ  ಮಾರಾಯ್ತಿ… ನನ್ನಂಥ ಮುದುಕನಿಗಲ್ಲ…’
`ಸರ್,ನೀವೇನು ಮುದುಕರಲ್ಲ ಬಿಡಿ…. ಯಾರನ್ನಾದರೂ ಮುದುಕರನ್ನಾಗಿ ಮಾಡ್ತೀರ ಅಷ್ಟೆ….’
`ಹಾಗೇ ತಿಳ್ಕೋ…ಆದ್ರೆ ಮಾಲ್‌ನಲ್ಲಿ ಒಳ್ಳೇ ಮಾಲಿದೆ ಅಂತ ಹೇಳ್ದೆ ಅಷ್ಟೆ!’
ರಂಗನಾಥ್ ದಿಢೀರನೆ ಮಾತು ಬದಲಿಸಿದರು.
`ನೋಡು, ನಿನ್ನನ್ನು ಕರೆದಿದ್ದು ಬರೀ  ಗುಂಡು ಹಾಕೋದಕ್ಕೆ ಅಲ್ಲ ಮಾರಾಯ್ತಿ… ಒಂದ್ ವಿಷ್ಯ ತಿಳ್ಸ್‌ಬೇಕಾಗಿತ್ತು… ನಾನು ಈ ಬ್ಯುಸಿನೆಸ್ ಬಿಡ್ತಾ ಇದೀನಿ… ಇದೆಲ್ಲ ಸಾಕು ಅನ್ನಿಸ್ತಿದೆ… ಸುಮ್ನೆ  ಇಲ್ಲಿಗೆ ಬಂದು ಒಂದಷ್ಟು ಇಂಗ್ಲಿಶ್ ಫಿಕ್ಶನ್‌ಓದ್ತಾ ಇದ್ದುಬಿಡೋಣ ಅನ್ನಿಸಿದೆ…’
ರಂಗನಾಥ್ ಬುಕ್ ವರ್ಮ್ ಅಂತ ನಾಗವೇಣಿಗೆ ಎಂದೋ ಗೊತ್ತು. ಅವರ ಮನೆಗೆ ಹೋದಾಗೆಲ್ಲ ಅವರು   ಬ್ರಿಟಿಶ್ ಲೈಬ್ರರಿಯಿಂದ ತಂದ ಪುಸ್ತಕಗಳನ್ನು ನೋಡಿದ್ದಾಳೆ. ವಾರಕ್ಕೆ ಆರೇಳು ಪುಸ್ತಕ ಓದುವ ರಂಗನಾಥ್ ಹೇಗೆ ಸಾಫ್ಟ್‌ವೇರ್ ರಂಗದ ಮಾಹಿತಿಗಳನ್ನೂ ಅಪ್‌ಡೇಟ್ ತಿಳ್ಕೊಂಡಿರ್‍ತಾರೆ ಎಂದು ನಾಗವೇಣಿಗೆಷ್ಟೋಸಲ ಅಚ್ಚರಿಯಾಗಿತ್ತು.
`ಯಾಕೆ ಸರ್, ಏನಾಯ್ತು? ನೀವು ಕೆಲ್ಸ  ಬಿಡೋದಕ್ಕೆ ಪಾರ್ಟಿ ಕೊಡ್ತಾ ಇದೀರ?’ ನಾಗವೇಣಿಯ ಮಾತಿನಲ್ಲಿ ದುಗುಡವಿತ್ತು. ಅವಳಿಗೆ ರಾಂಗ್‌ನಾಥ್ ಹೀಗೆ ರಾಂಗ್ ಪಾರ್ಟಿ ಥರ ಆಡ್ತಾರೆ ಅನ್ನೋ ಕಲ್ಪನೆ ಇತ್ತು. ಆದರೆ ಹೀಗೆ ಸಡನ್ನಾಗಿ ಇಂಥ ನಿರ್ಧಾರ ಹೇಳ್ತಾರೆ ಅಂತ ಅಂದ್ಕೊಂಡಿರಲಿಲ್ಲ.
ರಂಗನಾಥ್ ನಾಗವೇಣಿಯನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಮಳೆ ಹೆಚ್ಚಾಗಿದೆ. ಎಲ್ಲರೂ ಕುಡಿಯುತ್ತಿದ್ದಾರೆ. ಬಾರಿನಲ್ಲಿರೋ  ವಿಸ್ಕಿ, ವೈನು, ಜಿನ್, ರಮ್ ಎಲ್ಲವೂ ಬಳಬಳ ಖಾಲಿಯಾಗ್ತಿದೆ. ಈ ನಗರದಲ್ಲಿ ಹೀಗೆ ನಿರ್ಧಾರಗಳನ್ನು ಮಾಡುವುದು, ಪ್ರಕಟಿಸುವುದೇ ದೊಡ್ಡ ಲಿಕ್ಕರ್ ಮಾರ್ಕೆಟ್ ಆಗಿಬಿಟ್ಟಿದೆಯೇನೋ ಎಂದು ನಾಗವೇಣಿಗೆ ಅನ್ನಿಸಿತು. ಸ್ಕೀಮ್‌ಗಳನ್ನು ಹಾಕುವುದು, ಕ್ಯಾನ್ಸೆಲ್ ಮಾಡುವುದು, ಡೀಲ್‌ಗಳನ್ನು ಕುದುರಿಸುವುದು, ಮುರಿಯುವುದು… ಎಲ್ಲದಕ್ಕೂಗುಂಡು ಬೇಕೇ ಬೇಕು. ಯಾವುದೋ ರೇಡಿಯೋ ಜಾಹೀರಾತಿನಲ್ಲಿ ಈ ಥರಾನೇ ಬರ್‍ತಿತ್ತಲ್ಲ…. ಅದೇ ನನ್ನ ಒರಿಜಿನಲ್ ಥಾಟ್ ಥರ ಕಾಣಿಸ್ತಿದೆ ಎಂದು ನಾಗವೇಣಿಗೆ ನಗುವೂ ಬಂತು. ಹೊರಗಿನ ತಣ್ಣನೆ ಗಾಳಿಗೆ ಒಡ್ಡಿಕೊಂಡ ಮೈ ಮನಸ್ಸುಗಳು ಉಲ್ಲಸಿತವಾಗತೊಡಗಿದ್ದವು. ವೈನಿನ ಬೆಚ್ಚಗಿನ ಭಾವ ತುಂಬಿಕೊಳ್ಳುತ್ತಿದೆ… ಈ ರಾತ್ರಿ ನಾನು ಹೀಗೆಯೇ ನಿದ್ದೆ ಹೋಗುವೆ…. ಎಂಥ ಉನ್ಮತ್ತ ಎಚ್ಚರದ ಸ್ಥಿತಿಯಿದು… ನಾಗವೇಣಿಗೆ ಮತ್ತೆ  ಮತ್ತೆ  ರಂಗನಾಥರನ್ನೇ ನೋಡುತ್ತ ಕೂರೋಣ ಅನ್ನಿಸಿತು. ಅವರೂ ಹಾಗೆಯೇ ವಿಸ್ಕಿಯನ್ನು ಹೀರುತ್ತ, ಸಿಗರೇಟನ್ನು  ಸುಡುತ್ತ ಕೂತಿದ್ದಾರೆ. ಐವತ್ತೆರಡು ವರ್ಷಗಳ ರಂಗನಾಥ್ ಈವರೆಗ ಉಳಿಸಿದ್ದೇನೂ ಇಲ್ಲ.
ಹೆಚ್ಚೆಂದರೆ ಹಲವು ಕಿಲೋಗಳಷ್ಟು ಬೂದಿಯನ್ನು ಆಶ್‌ಟ್ರೇಯಲ್ಲಿ ಕೆಡವಿರಬಹುದು. 
ತನಗೆ ಯಾಕೆ ಸಾಫ್ಟ್‌ವೇರ್ ಉದ್ಯಮ ಬೋರ್ ಆಗುತ್ತಿದೆ… ಯಾಕೆ ಈಗ ಬರ್‍ತಾ ಇರೋಇಂಜಿನಿಯರ್‌ಗಳು ಭವಿಷ್ಯದ ಸಾಫ್ಟ್‌ವೇರ್ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಳ್ತಾ ಇಲ್ಲ…. ಯಾಕೆ ಈಗ ಸಂಬಳ ಹೆಚ್ಚಾದರೂ ಗುಣಮಟ್ಟದ ಸೇವೆ ನೀಡೋದಕ್ಕೆ ಈ ಇಂಜಿನಿಯರ್‌ಗಳಿಗೆ ಆಗುತ್ತಿಲ್ಲ…. ಯಾಕೆತನಗೆ ಸಂಬಳವನ್ನು ಹೆಚ್ಚು ಮಾಡಿಯೂ  ಆಟ್ರಿಶನ್‌ನ್ನು  ತಡೆಯೋದಕ್ಕಾಗ್ತಾ ಇಲ್ಲ …. ರಂಗನಾಥ್ ಹೇಳುತ್ತಲೇ ಇದ್ದಾರೆ.. ನಾಗವೇಣಿಯೂ ವೈನಿನ ಬಿಸಿಗೆ ಮತ್ತಷ್ಟು ಬೆಚ್ಚಗಾಗುತ್ತ  ಕೇಳುತ್ತಿದ್ದಾಳೆ….
ಸುಮಾರು ಒಂದು ತಾಸು ರಂಗನಾಥ್ ಮಾತಾಡಿದ್ದಾರೆ….ನಾಗವೇಣಿ ಎಲ್ಲಾ ಮಾತುಗಳನ್ನೂ  ಸಹನೆಯಿಂದ ಕೇಳಿಸಿಕೊಂಡಿದ್ದಾಳೆ. ಒಂಬತ್ತೂವರೆ ಆಗಿದೆ. ಇನ್ನು ಮನೆಗೆ ಹೋಗಿ ಮಲಗೋಹೊತ್ತಿಗೆ ಹನ್ನೊಂದಾಗುತ್ತೆ…
ನಾಗವೇಣಿಗೆ ಹಾಗಂತ  ಇದೆಲ್ಲ ತಡವೇನಲ್ಲ. ಅವಳು ಯಾವತ್ತೂ ಬ್ಯುಸಿನೆಸ್ ನೋಡ್ತಾಳೆ.ಹಲವು ಸಲ ಫ್ರೆಂಡ್‌ಶಿಪ್ ಕೂಡಾ ನೋಡ್ತಾಳೆ.
ರಂಗನಾಥ್ ಮಾತಿನ ಪ್ರವಾಹದ ನಡುವೆ ನಾಗವೇಣಿ ಕೂಡಾ  ಮಾತು ಸೇರಿಸಿದ್ದಾಳೆ. ಅತ್ತ ಇತ್ತ ಟೇಬಲ್ಲಿನವರೂ ಹೀಗೇ ಯಾವುದೋ ಘನಗಂಭೀರ ಮಾತುಕತೆಯಲ್ಲಿ ತೊಡಗಿದ್ದಾರೆ. ದಢೂತಿ ದೇಹದ ಆ ಗಂಡಸಿನ ಜೊತೆಗೆ ಆ ಬಾರ್ಬೀ ಗರ್ಲ್‌ನಂಥ ಹುಡುಗಿ ಏನು ಮಾತುಕತೆ ನಡೆಸಿರಬಹುದು….. ಅವಳು ಅವನ ಮಗಳೆ, ಸ್ನೇಹಿತೆಯೆ? ದೂರದ ಸಂಬಂಧಿಯೆ? ಯಾಕೆ ನನಗೆ ಈ ಉಸಾಬರಿ ಎಂದು ನಾಗವೇಣಿ ಮತ್ತೆ ರಂಗನಾಥರತ್ತ ತಿರುಗಿದಳು.  ರಾತ್ರಿಯಿಡೀ ರೇಡಿಯೋ ಕೇಳುತ್ತ  ತೂಕಡಿಸಿದ ಹಾಗೆ  ಆಗ್ತಾ ಇದೆಯಲ್ಲ ಎಂದು ನಾಗವೇಣಿ ಮತ್ತೆ ಟಾಯ್‌ಲೆಟ್‌ಗೆ ಹೋಗಿ  ಮುಖ ತೊಳೆದಳು. ಮತ್ತೆ ಫ್ರೆಶ್ ಆಗಿದ್ದೇನೆ, ಇನ್ನು ರಂಗನಾಥ್ ಎಷ್ಟಾದರೂ ಮಾತಾಡಿಕೊಳ್ಳಲಿ ಎಂದು ನೋಡಿದರೆ ರಂಗನಾಥ್ ಹಾಗೆಯೇ  ಸೋಫಾಗೆ ಒರಗಿ ನಿದ್ದೆಗೆ ಜಾರಿದ್ದಾರೆ.
`ಏಳಿ ಸಾರ್’ ಎಂದು ನಾಗವೇಣಿ ಮೆಲ್ಲಗೆ ರಂಗನಾಥ್  ಭುಜ ಹಿಡಿದು ಅಲ್ಲಾಡಿಸಿದಳು. ಒರಗಿಕೊಂಡೇ ಕಣ್ಣು ಅರಳಿಸಿದ ರಂಗನಾಥ್ `ಅಲ್ವೆ, ನನ್ನ ಪುಸ್ತಕ  ಏನಾಯ್ತು?’ ಎಂದು ಹಠಾತ್ತನೆ ಪ್ರಶ್ನಿಸಿದರು.
ನಾಗವೇಣಿ ಬ್ಯಾಗಿನಿಂದ ಸಿಡಿ ಪ್ಯಾಕೆಟನ್ನು  ಅವರಿಗೆ ಕೊಟ್ಟ ಕೂಡಲೇ ಅವರು  ಮತ್ತೆ ಮಾತು ಮುಂದುವರೆಸಿದರು. `ಯಾಕೆ ನನಗೆ ಅಲನ್‌ವ್ಯಾಟ್, ಉಂಬರ್ಟೊ ಇಕೋ ತುಂಬಾ ಇಷ್ಟ ಎಂದು  ನೀನು ಕೇಳಬಹುದು.ನನಗೆ ಹಾಗೆ ಯಾರೂ ತುಂಬಾ ಇಷ್ಟ ಅಂತೇನಿಲ್ಲ. ಬ್ರಿಟಿಶ್ ಲೈಬ್ರರೀಲಿ ನಾನು ಕೈ ಹಾಕಿ ಎಳೆದ ಪುಸ್ತಕಾನೇ ತಂದು ಓದಿಬಿಡ್ತೀನಿ…..’
`ಸರಿ ಸರ್, ನಿಮ್ಮನ್ನ ಯಾವಾತ್ತಾದ್ರೂ ಈ ಪ್ರಶ್ನೆ ಕೇಳಿದ್ನಾ?’  ನಾಗವೇಣಿ ಮತ್ತೆ  ಮತ್ತೇರಿಲ್ಲ ಎಂಬಂತೆ ಕೈಗಳನ್ನು ಟೇಬಲ್ಲಿಗೆ ಊರಿ ಅವರನ್ನೇ ನೋಡುತ್ತ ಕೇಳಿದಳು.
ಬೇರರ್ ಬಂದ.ಕೊನೆಗೆ ಬಿಲ್ಲಾಯಿತು.  ರಂಗನಾಥ್ ನಗುನಗುತ್ತ ತಾವೇ ಬಿಲ್ ಕಸಿದುಕೊಂಡು ಪೇಮೆಂಟ್ ಮಾಡಿದರು. `ಸರಿ ಪಾರ್ಕಿಂಗ್ ಹತ್ರ ಆರಾಮಾಗಿ ಮಾತಾಡ್ಕೋತ ಹೋಗೋಣ, ಇಲ್ಲೇ ಇರು, ನಿಂಗೊಬ್ಳಿಗೇ ಎಲ್ಲ ಒತ್ತಡ ಅಂದ್ಕೋಬೇಡ,ನಾನೂ ಟಾಯ್‌ಲೆಟ್‌ಗೆ ಹೋಗ್ಬೇಕು’ ಎಂದು ರಂಗನಾಥ್ ನಾಗವೇಣಿಯ ಬೆನ್ನಿಗೆ  ಏಟು ಕೊಡುತ್ತ ಎದ್ದರು. ಕೊಂಚ  ತೂರಾಡುತ್ತ, ಆದರೂ ಯಾವುದೇ ಹದ ತಪ್ಪಿಲ್ಲ ಎನ್ನುವಂತೆ ಅವರು  ನಡೆದುಕೊಂಡು ಹೋಗುವಾಗ ಇವರನ್ನು ಯಾಕೆ ಹಾಗೇ ಭುಜಕೊಟ್ಟು ಕರಕೊಂಡು ಹೋಗಬಾರದು ಎಂದು ನಾಗವೇಣಿಗೆ ಒಮ್ಮೆ ಅನ್ನಿಸಿತು.
ಹೇಳಿಕೇಳಿ ರಂಗನಾಥ್ ವಿದುರ. ತಾನೋ ಎಲ್ಲರಿಂದ ದೂರವಿದ್ದು ಸ್ವಚ್ಛಂದ ಬದುಕಿನಲ್ಲಿ ಈಜಾಡುತ್ತಿದ್ದೇನೆ.  ಅಂದಮೇಲೆ ನಾವು ಯಾಕೆ ಹೀಗೆಬರಿಯ ದೇಹವೇತರ ಸ್ನೇಹದಲ್ಲಿ ಅರಳುತ್ತಿದ್ದೇವೆ…. ಯಾಕೆ ರಂಗನಾಥ್ ಎಂದೂ ತನ್ನನ್ನು ಅವರ ಫ್ಲಾಟ್‌ಗೆ  ಕರೆದಿಲ್ಲ….. ಯಾಕೆ ನಾನಾದರೂ ಅವರ ಕಾರು ಹತ್ತಿಲ್ಲ?  ಯಾಕೆ ನಾನು ಅವರಿಗೆ ದಿನಾ ಫೋನ್ ಮಾಡುವಾಗ ಒಮ್ಮೆಯಾದರೂ  ಲೊಚ ಲೊಚ ಮುತ್ತಿಡುವ ಅನ್ನಿಸಿಲ್ಲ? ಯಾಕೆ ಅವರು  ನನ್ನಜೊತೆ ಸೆಕ್ಸ್‌ಬಗ್ಗೆ ಮಾತಾಡಲ್ಲ……
ನಾಗವೇಣಿಗೆ ಎಲ್ಲ ಯೋಚನೆಗಳೂ ಧುಮ್ಮಿಕ್ಕಿ ಒಂದು ಸಲ ಕಣ್ಣುಮಂಜಾಯಿತು. ಏನಾದರಾಗಲಿ, ರಂಗನಾಥ್ ನನ್ನ ಒಬ್ಬ ಕ್ಲೋಸ್ ಫ್ರೆಂಡ್ ಆಗಿದಾರಲ್ಲ ಅನ್ನಿಸಿ ಮೈಯೆಲ್ಲ ಹಗುರವಾದ ಹಾಗೆ……. ಈ ಬೆಂಗಳೂರಿನಲ್ಲಿ ಏನು ಬೇಕಾದರೂ ಸಿಗದೇಹೋಗಬಹುದು, ಆದ್ರೆ ಇಂಥ ವ್ಯಕ್ತಿಯ ಸ್ನೇಹ ಇಲ್ಲದೇ ಹೋಗಿದ್ದರೆ ನಾನು ಎಲ್ಲೋ ಕಳೆದೇಹೋಗುತ್ತಿದ್ದೆ…… ಅವತ್ತು ಬ್ರಿಟಿಶ್ ಲೈಬ್ರರೀಲಿ  ಅವರು ಹಾಗೆ ನಕ್ಕು ಮಾತನಾಡಿಸದೇ ಇದ್ದಿದ್ರೆ… ಬಹುಶಃ ನಾನು ಇವತ್ತು ಯಾವುದೋ ಮಾಲ್‌ನಲ್ಲೋ, ಯಾವುದೋ ಪಬ್‌ನಲ್ಲೋ ಯಾವುದೋ ಹುಡುಗನ ಜೊತೆಗೆ ಪೆಚ್ಚುಪೆಚ್ಚಾಗಿ ಕೂತಿರುತ್ತಿದ್ದೆ…. ಅಂಡಲೆಯುತ್ತಿದ್ದೆ…. ಗುರುತಿಲ್ಲದ, ಕುರುಹಿಲ್ಲದ ಹಾಗೆ ಎಲ್ಲೋ ರೂಪಾಯಿಗಳನ್ನು ಎಣಿಸುತ್ತ ಯಾವುದೋ ಕ್ರೆಡಿಟ್ ಕಾರ್ಡಿನಲ್ಲೇ ಎಲ್ಲ ಖರೀದಿ ವ್ಯವಹಾರಗಳನ್ನೂ ತೂರಿಸುತ್ತ,  ಮಜಾ ಉಡಾಯಿಸುತ್ತಿದ್ದೆ… ಅಥವಾ ನಾನು ಹೇಗೆ ಇರ್‍ತಿದ್ದೆ ಎಂದೇ ನಂಗೊತ್ತಿಲ್ಲ……
ರಂಗನಾಥ್ ಮತ್ತೆ ಕೂರಲಿಲ್ಲ. ಇಬ್ಬರೂ ನಿಧಾನವಾಗಿ ಮೊಗಸಾಲೆಯನ್ನು ಹಾದು ಪಾರ್ಕಿಂಗ್‌ಗೆ ಬಂದರು.
ರಂಗನಾಥ್ ಕಾರಿನ ಬಾಗಿಲು ತೆರೆದರು.
ನಾಗವೇಣಿಗೆ ಇನ್ನ ತಡೆಯಲಾರೆ ಅನ್ನಿಸಿತು.
`ಇವತ್ತು ನನ್ನ ಬರ್ಥ್‌ಡೇ ಸರ್. ವಿಶ್ ಮಾಡಿ’ ಅಂದಳು.
ರಂಗನಾಥ್ ಅವಳ ಕೈ ಹಿಡಿದು `ಏನೇ ಹುಡುಗಿ ಮೊದ್ಲೇ ಹೇಳಬಾರದಿತ್ತ? ನಿನ್ನ ಹತ್ರಾನೇ ಬಿಲ್ ವಸೂಲಿ ಮಾಡ್ತಿದ್ದೆ. ಎನಿ ಹೌ,ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಅಂತೂ ಚೆನ್ನಾಗೇ ಆಯ್ತು ಪಾರ್ಟಿ….’ ಎಂದರು.
ನಾಗವೇಣಿಗೆ ಅಳು ಬಂದೇ ಬಿಟ್ಟಿದೆ. `ಸರ್, ನೀವು ಯಾವತ್ತೂ ನನ್ನ ಜತೆ ಮಾತಾಡ್ತಾ ಇರಬೇಕು ಸರ್…  ನಾನು ಈ ಊರಲ್ಲಿ ಐಡೆಂಟಿಟೀನೇ ಇಟ್ಕೊಳ್ಳೋದಕ್ಕೆ ಆಗ್ತಾ ಇಲ್ಲ ಸರ್… ಪ್ಲೀಸ್….. ಗುಂಡು ಹಾಕೋದು ಕಡಿಮೆ ಮಾಡಿ ಸರ್… ನೀವು ಇನ್ನೂ ಮಿನಿಮಮ್ ಇಪ್ಪತ್ತು ವರ್ಷ ಹೀಗೇ ನಂಜೊತೆ ಮಾತಾಡ್ಬೇಕು ಸರ್…..’
ಇನ್ನು ಮಾತುಗಳನ್ನು ಹೊರಗೆ ಚೆಲ್ಲಲಾರೆ ಎಂಬಂತೆ ರಂಗನಾಥ್ ತುಟಿಗಳನ್ನು ಉಬ್ಬಿಸಿದರು. ಒಮ್ಮೆ ಮೆದುವಾಗಿ ಜೋಲಿ ಹೊಡೆದು ಹೇಳಿದರು…
`ನಾಗವೇಣಿ, ನಿನ್ನ ಫ್ರೆಂಡ್‌ಶಿಪ್ ಯಾಕೆ ಮರೀತೀನಮ್ಮ…. ನಿನ್ನನ್ನು ನಾನು ಪುಸ್ತಕಗಳ ನಡುವೆ ನೋಡಿದೀನಿ… ನೀನು ಪುಸ್ತಕಗಳ ಹೊರಗೆ ಇರೋ ಕ್ಯಾರೆಕ್ಟರ್. ನಾನು ಪುಸ್ತಕಗಳನ್ನು ಓದದೇ ಇರೋವಾಗೆಲ್ಲನೀನೇ ನೆನಪಾಗ್ತೀಯ… ಸರಿ, ಲೇಟಾಯ್ತು… ಬೈ…. ಚೀರ್ ಅಪ್ ಮೈ ಗರ್ಲ್’ ಎಂದು ರಂಗನಾಥ್ ನಾಗವೇಣಿಯ ಭುಜ ತಟ್ಟಿ ಕಾರಿನಲ್ಲಿ ಕೂತರು.
ಕಾರು ನಿಧಾನವಾಗಿ  ಗೇಟು ದಾಟುತ್ತಿದ್ದಂತೆ ನಾಗವೇಣಿ ಸ್ಕೂಟಿಯತ್ತ ಧಾವಿಸಿದಳು.
ಅವಳು  ಬೆಳಗ್ಗೆ ಮೂರು ಕ್ಲೈಂಟ್‌ಗಳನ್ನು  ಕಾಣಬೇಕಿದೆ.

0 thoughts on “ನಾಗವೇಣಿ

  1. ಅದ್ಯಾವ ಇಂಟರ್ನೆಟ್ಟು.. ಎಂಟು ಎಂಬಿ ಡೌನ್ ಲೋಡ್ ಆಗಲು ಮೂರುದಿನ ತೆಗೆದುಕೊಂಡಿದ್ದು??
    ಬರವಣಿಗೆ ಇಷ್ಟವಾಯಿತು…

Leave a Reply

Your email address will not be published. Required fields are marked *

17 − 3 =

This site uses Akismet to reduce spam. Learn how your comment data is processed.