ಕಿಟಕಿ

Short story published in Hosadigantha  Yugadi Special issue 2006

ನನಗೆ ಕಚೇರಿಯಲ್ಲಿ ಅಪರಾತ್ರಿಯಲ್ಲೂ ಇರುವ ಕೆಟ್ಟ ಚಟ. ಹಗಲು ಲೇಟು. ರಾತ್ರಿಯೂ ಲೇಟು. ಸುತ್ತೋಲೆ, ಪತ್ರ ವ್ಯವಹಾರ, ಆಡಳಿತ ಮಂಡಳಿ ಸಭೆಗೆ ತಯಾರಿ, ಯಾವುದೇ  ಇದ್ದರೂ ನಾನು ಕಚೇರಿಗೆ ಹೋಗುವುದು ಹನ್ನೆರಡರ ಮೇಲೆಯೇ. ಆಮೇಲೆ ಊಟದ ಹೊತ್ತಿಗೆ ಎಲ್ಲ ವ್ಯವಹಾರಗಳನ್ನೂ ಕಂಪ್ಯೂಟರಿನಲ್ಲಿ ಹಾಯಿಸಿ ರೆಡಿ ಮಾಡುತ್ತೇನೆ. ಇದ್ದಬದ್ದ ಇಂಟರ್‌ನೆಟ್ ಪಡಿತರವನ್ನೆಲ್ಲ ನಾನೇ ಖಾಲಿ ಮಾಡುತ್ತ ಕುಳಿತುಕೊಳ್ಳುತ್ತೇನೆ.  ತಿಂಗಳಿಗೆ ನಾಲ್ಕು ಗೈಗಾಬೈಟ್ ಎಂದರೆ ಸಾಮಾನ್ಯವಲ್ಲ. ಈಗ ನೋಡಿ, ಆಸ್ಕರ್ ಪಡೆದ ದಿ ಕಾನ್‌ಸ್ಟಂಟ್  ಗಾರ್ಡನರ್ ಸಿನೆಮಾವನ್ನೇ ಡೌನ್‌ಲೋಡ್ ಮಾಡಲು ಹೆಣಗುತ್ತಿದ್ದೇನೆ.

ಪ್ರತಿದಿನ ಹೀಗೆ ನನ್ನೆಲ್ಲ ಇಂಟರ್‌ನೆಟ್ ಚಟವನ್ನು ತೀರಿಸಿಕೊಳ್ಳಲು ಕುಳಿತಾಗ ಕಿಟಕಿಯ ಕರ್ಟನ್ ಸರಿಸುತ್ತೇನೆ. ಹಗಲು ಸೂರ್ಯ ಭಾರೀ ಕಾಟ ಕೊಡುತ್ತಾನೆ. ಬಿಸಿಲು ರಾಚಿ ನನ್ನ ಹಣೆಯೆಲ್ಲ ಬೆವರುತ್ತದೆ. ಫ್ಯಾನ್ ಹಾಕಿದರೆ ಪ್ರಿಂಟ್ ಔಟ್ ತೆಗೆಯಲು ಬರಲ್ಲ. ಮಧ್ಯಾಹ್ನದವರೆಗೆ  ನನ್ನ ಪಕ್ಕದ ಕ್ಯೂಬಿಕಲ್‌ನಲ್ಲೇ ಇರುವ ಹಣಕಾಸು ಸಲಹೆಗಾರರು ಮಾತ್ರ ಮೂರು ಮಹಡಿ ಹತ್ತಿ ಬಂದಕೂಡಲೇ ಫ್ಯಾನ್ ಹಾಕುತ್ತಾರೆ. ಈದು ಇಬ್ಬರಿಗೂ ಗಾಳಿಯನ್ನು ಹಂಚುತ್ತದೆ. ಕಿಟಕಿಯ ಗಾಜು ಸರಿಸಲು ಅವರಿಗೆ ಬರಲ್ಲ. ಎರಡು ಸಲ ಹಾಕಿದ್ದ  ಬೇರಿಂಗ್ ಎಲ್ಲ ಕಿತ್ತುಹೋಗಿ ಆಳೆತ್ತರದ ಗಾಜಿನ ಆ ಬಾಗಿಲನ್ನು ತೆರೆಯಲು ಅವರಿಗೇನು, ನನಗೂ ಭಯ. ಕಳೆದ ವರ್ಷ ಬೇರೆ  ರೂಮಿನಲ್ಲಿದ್ದಾಗ  ಹೀಗಯೇ ಬಾಗಿಲನ್ನು ಬಲವಂತವಾಗಿ ಎಳೆದಾಗ ಅದು ನಿನ್ನ ಸಹವಾಸವೇ ಸಾಕು ಎಂದು ಕಿಟಕಿಯಿಂದ ಹೊರಗೆ ಹಾರಿತ್ತು. ಗಾಳಿಯಲ್ಲಿ ಅದು ತೇಲಿ ತೇಲಿ ಹತ್ತು ಸೆಕಂಡುಗಳ ನಂತರ ಬೇಸ್‌ಮೆಂಟ್ ಮೇಲೆ ಫಳಾರನೆ ಬಿದ್ದಾಗಲೇ  ಕಚೇರಿಯಲ್ಲಿ ಇದ್ದವರಿಗೆ  ಗೊತ್ತಾಗಿದ್ದು. ಎಲ್ಲರೂ ಮೆಂಟೇನೆನ್ಸ್ ಉಸ್ತುವಾರಿ ಹೊತ್ತವನಿಗೆ ಬೈಯ್ಯುವವರೇ.
ನೋಡಿ, ಕರ್ಟನಿನಿಂದ ಎಲ್ಲಿಗೋ ಜಾರಿದೆ. ಕರ್ಟನ್ ಸರಿಸಿ ಈ ಬದಿಯ ಗಾಜನ್ನೂ ಎಳೆದರೆ ತಣ್ಣನೆಯ ಗಾಳಿ ನುಗ್ಗುತ್ತದೆ. ಅದರ ಜೊತೆಗೇ ರಸ್ತೆಯಲ್ಲಿ ಗಿಜಿಗುಡುವ ವಾಹನಗಳ ಸದ್ದೂ ಬರುತ್ತದೆ. ನಾನು ಸಂಜೆಯಾದ ಕೂಡಲೇ ಕರ್ಟನ್ ಸರಿಸುತ್ತೇನೆ. ಮಧ್ಯಾಹ್ನ ನನಗೆ ಇಷ್ಟವಾಗದ ಸೂರ್ಯ ಸಂಜೆ ಆರಾಮಾಗಿ ಮುಳುಗುವಾಗ ಅವನನ್ನೇ ನೋಡುತ್ತೇನೆ. ದೂರದ ತೆಂಗಿನ ಮರದಾಚೆ ಆತ ಮುಳುಗುತ್ತಿದ್ದರೆ ನನಗೆ ರಾತ್ರಿ ಬರುತ್ತಿರೋ ಸುಖದ ವಸನೆ ಬಡಿಯುತ್ತದೆ.
ನನ್ನ ಕಚೇರಿಯ ಕಿಟಕಿಯಿಂದ ಸುಮಾರು ಅರ್ಧ  ಒಂದು ಫರ್ಲಾಂಗು ದೂರದಲ್ಲಿ  ಆ ಆಸ್ಪತ್ರೆ ಕಾಣಿಸುತ್ತದೆ. ಮೂರು ಮಹಡಿಗಳ ಆ ಕಟ್ಟಡದ ಕೋಣೆಗಳೆಲ್ಲ ರಾತ್ರಿಯಿಡೀ ಬಿಳಿಯಾಗಿರುತ್ತವೆ. ಯಾರದೋ ನೆರಳುಗಳು ಸರಸರನೆ ಅತ್ತಿತ್ತ ಚಲಿಸುತ್ತವೆ. ಕೆಲವೊಮ್ಮೆ  ಕೆಲವು ದೀಪಗಳು ಆರಿಹೋಗುತ್ತವೆ.
ಹೀಗೆ ಆರಿಹೋದ ದೀಪವಿದ್ದ ಒಂದು ಕೋಣೆಯಲ್ಲಿ ನನ್ನ ಗೆಳೆಯನ ಅಪ್ಪನವರೂ ಇದ್ದರು.
………………………

ರಾಯಚೂರಿನಿಂದ ಶಿರಸಿಗೆ ಹೋಗುತ್ತಿದ್ದೆ. ತಾವರಗೇರಾದಲ್ಲಿ ಯೂರಿನಲ್ಸ್‌ನಲ್ಲೇ ತಲೆ ತಿರುಗಿ ಬಿದ್ದೆ. ಹೇಗೋ ಎದ್ದು ಸೀದಾ ನನ್ನ ಬಸ್ಸನ್ನೇ ಹತ್ತಿಬಿಟ್ಟಿದ್ದು ನನಗೆ ಎಷ್ಟೋ ನಿಮಿಷಗಳ ನಂತರ ಗೊತ್ತಾಯಿತು. ಹಠಾತ್ತಾಗಿ ಮೇಲೆ ಕಣ್ಣು ಹಾಯಿಸಿದಾಗ  ಶಿರಸಿಯ ನನ್ನ ವೈತ್ತಿಬದುಕಿನಷ್ಟೇ ಹಳತಾದ ವಿಶ್ವಾಸ್ ಬ್ಯಾಗ್ಸ್‌ನ ಲೆದರ್ ಸೂಟ್‌ಕೇಸ್ ಕಾಣಿಸಿ ಸಮಾಧಾನವಾಯಿತು.
ಕುಷ್ಟಗಿಯಲ್ಲಿ ಇಳಿದು  ಯಾರನ್ನೋ ಕೇಳಿಕೊಂಡು ಸೀದಾ ಅವರ ಮನೆಗೆ ಹೋದೆ. ಗೆಳೆಯನ ಅಮ್ಮ ಅಲ್ಲಿ ಇದ್ದರು. ದೊಡ್ಡ ಮನೆ. ಎಷ್ಟೋ ಜನ ತಮ್ಮಂದಿರು. ತಂಗಿಯಂದಿರು. ಈತ ನೋಡಿದರೆ ಹುಬ್ಬಳ್ಳಿಗೆ ಹೋಗಿದ್ದಾನೆ.
ನಾನು ನನ್ನ ತಲೆಗೆ ಪೆಟ್ಟಾಗಿದೆ ಎಂದು ಅಮ್ಮನಿಗೆ ಹೇಳಿದೆ. ನನ್ನ ಸಂಕಟವೆಲ್ಲ ಮುಖದಲ್ಲೇ ಹೆಪ್ಪುಗಟ್ಟಿತ್ತೇನೋ… ಅಮ್ಮ ಕೂಡಲೇ ಹಾಸಿಗೆ ಹಾಸಿಕೊಟ್ಟರು. ಕೈ ಕಾಲು  ತೊಳೆದು ಊಟಕ್ಕೆ ಕೂತೆ. ತಿಂದಿದ್ದೆಲ್ಲ ಐದೇ ನಿಮಿಷದಲ್ಲಿ  ವಾಂತಿಯಾಯಿತು. ಅಮ್ಮ ಬೇಜಾರು ಮಾಡಿಕೊಳ್ಳಲಿಲ್ಲ. ಮಲಗಿದರೆ ನಿದ್ದೆ ಇಲ್ಲ. ಎಂಥದೋ ಸಂಕಟ.
ಸಂಜೆ ಗೆಳೆಯ ಬಂದ. ಅವನ ಜೊತೆಗೆ ಡಾಕ್ಟರರ ಹತ್ತಿರ ಹೋದೆವು. ಒಂದು ಇಂಜೆಕ್ಷನ್ ಕೊಟ್ಟ ಅವರು `ಇನ್ನೂ ೪೮ ತಾಸು ಅಬ್ಸರ್ವ್ ಮಾಡೋಣ,ಇಲ್ಲೇ ಉಳೀಲಿ’ ಎಂದರು. ನಿಧಾನವಾಗಿ ನಡಕೊಂಡು ಬಂದೆವು.
ಮನೆಗೆ ಬಂದಾಗ ಅವನ ಅಪ್ಪ ಅಲ್ಲಿ ತೂಗುಮಂಚದ ಮೇಲೆ ಕುಳಿತಿದ್ದರು. ನನ್ನನ್ನು ನೋಡಿ ನಸುನಕ್ಕರು. ಅವರ ಗಾಂಭೀರ್ಯಕ್ಕೆ ನಾನು ಮನಸೋತೆ. ಅಲ್ಲೇ ನಾಲ್ಕು ದಿನ ಇದ್ದೆ.
ಟ  ಟ  ಟ  ಟ
ಈಗ ಇಲ್ಲಿ ಮೂರನೇ ಮಹಡಿಯಲ್ಲಿ ವನ್ನೆ ನಾನು ಮತ್ತೆ ತಲೆತಿರುಗಿ ಬಿದ್ದಿದ್ದೆ.  ಅವತ್ತು ಯೂರಿನಲ್‌ಗೆ ಹೋದಾಗ ಅಲ್ಲೇ ತಲೆ ತಿರುಗಿ ಬಿದ್ದೆ. ಹೇಗೋ ಕಚೇರಿ ಒಳಗೆಬಂದು ಮೇಜಿಗೆ ತಲೆಯಾನಿಸಿದೆ. ಆಗ ಕಚೇರಿಗೆ ಬಂದವರೇ ಒಬ್ಬರು. ಬೆಳಗ್ಗೆ ತಿಂದಿದ್ದೆಲ್ಲ ವಾಂತಿಯಾಯ್ತು. ತಲೆಯಲ್ಲಿ ವಿಚಿತ್ರ ಸಂಕಟ. ಹೊಟ್ಟೆಯಲ್ಲೂ ವಿಚಿತ್ರ ದಾಹ, ಸಂಕಟ. ಕೊನೆಗೆ ಹೇಗೋ ಗೆಸ್ಟ್‌ಹೌಸ್‌ಗೆ ಹೋಗಿ ಮಲಗಿದೆ. ಅಲ್ಲಿ ನಮ್ಮ ಅಟೆಂಡರ್ ಬಂದು ಜೊತೆಗೆ ಕುಳಿತ. ಜೂಸ್ ಕುಡಿದರೂ ವಾಂತಿ, ಹಾಲು ಕುಡಿದರೂ ವಾಂತಿ. ಸಂಜೆವರೆಗೆ ಅದೇ ಸ್ಥಿತಿಯಲ್ಲಿ ಮಲಗಿದ್ದೆ.  ಎಲ್ಲರಿಗೂ ಆತಂಕ. ನಾಲ್ಕು ದಿನ ಹಾಗೇ ಇದ್ದೆ.  ಹೊಟ್ಟೆಯೆಲ್ಲ ಖಾಲಿ ಖಾಲಿ. ಆಮೇಲೆ ನಿಧಾನವಾಗಿ ದೇಹ ಮೊದಲಿನ ಸ್ಥಿತಿಗೆ ಬಂತು.
ತಲೆ ತಿರುಗಿ ಬಿದ್ದು ಎಚ್ಚರವಾಗುತ್ತಿದ್ದಂತೆ ಎಂಥ ವಿಚಿತ್ರ ಮಾನಸಿಕತೆ ಅಂದ್ರೆ… ಎಲ್ಲಿದ್ದೇನೆ, ಹ್ಯಾಗಿದ್ದೇನೆ ಎಂಬ ಯಾವ ಅರಿವೂ ಇಲ್ಲದ, ಕನಸೂ ಅಲ್ಲದ  ತೇಲುಪಯಣದ ಹಾಗೆ….. ಯೂರಿನಲ್,ವಾಶ್ ಬೇಸಿನ್ ಎಲ್ಲವೂ ಕಲಾಕೃತಿಗಳ ಹಾಗೆ  ತೇಲಿ ತೇಲಿ ಬರುತ್ತಿದ್ದವು.  ಕಿಟಕಿಯೂ ಗೋಡೆಯ ಮೇಲೇ ತೇಲುತ್ತಿದ್ದ ಹಾಗೆ..
ಎಷ್ಟೋ ವರ್ಷಗಳ ನಂತರ ಆ ಕನಸುಗಳು ಮರಳುತ್ತಿದ್ದವು.
ಹತ್ತು ನಿಮಿಷ ಆ ಕನಸು ಮೂಡುತ್ತಲೇ ಇತ್ತು. ಆಮೇಲೆ ಕೊಂಚ ಎಚ್ಚರ… ಅರೆ ಇದೆಲ್ಲ ಏನು ಎಂದು ಯೋಚಿಸುವ ಬುದ್ಧಿಯೂ ಮರಳಿತು.
ಕಚೇರಿಯಲ್ಲಿ ಇದ್ದ ಎಲ್ಲರೂ ಹೆದರಿದ್ದರು. ದಿನಾಲೂ ಲಿಫ್ಟ್ ಕೂಡಾ ಬಳಸದೆ ಓಡಾಡುತ್ತಿದ್ದ ಈ ಮನುಷ್ಯ ಇಷ್ಟು ದುರ್ಬಲನಾ ಎಂದು ಗಾಬರಿಯಾಗಿದ್ದರು.
ಅವತ್ತು ಗೆಸ್ಟ್‌ಹೌಸ್‌ನಲ್ಲಿ ಮಲಗಿದ್ದಾಗ ಅವರು ನೆನಪಾದರು.
ಅರೆ, ಹೌದಲ್ಲ, ಅವರು ಎಷ್ಟೋ ವಾರಗಳ ಕಾಲ ಇದೇ ಆಸ್ಪತ್ರೆಯಲ್ಲಿ, ಕಣ್ಣಳತೆಯ ದೂರದಲ್ಲೇ ಇದ್ದರೂ ನಾನು ನೋಡಲಿಲ್ಲ .
………………………
ಈ ಕಿಟಕಿಯ ಬದಿಯಲ್ಲೇ ಕಣ್ಣಿನ ಆಸ್ಪತ್ರೆ ಇದೆ. ಅದನ್ನು ಈಗ ರೆನೋವೇಶನ್ ಮಾಡ್ತಿದಾರೆ. ಡಬಲ್ ರೋಡಿನ ಘನತೆಗೆ ಕುಂದು ತರಬಾರದಲ್ಲ ಎಂದು  ಅದರ ಮುಸುಡಿಗೆ ವಿಚಿತ್ರ ಆಕಾರ ನೀಡಿ ಬಣ್ಣ ಬಳಿಯುತ್ತಿದ್ದಾರೆ. ಎದುರಿಗೆ ಫ್ಲೈ ಓವರ್ ಜಂಕ್ಷನ್. ನಾನು ಲಿಫ್ಟ್ ಬಳಸದೆ ಮೆಟ್ಟಿಲುಗಳ ಮೂಲಕ ಇಳಿಯುವಾಗ ಈ ಫ್ಲೈ ಓವರಿನ ಟ್ರಾಫಿಕ್ ಜಾಮ್ ಕಾಣುತ್ತದೆ. ಕೆಳಗೂ ಅಷ್ಟೆ. ನಾನು ಕಾಂಪೌಂಡಿನಿಂದ ಕಾರನ್ನು  ರಸ್ತೆಗೆ ಇಳಿಸಲೇ ಹತ್ತು ನಿಮಿಷ ಬೇಕು. ಅಷ್ಟು ಹೊತ್ತಿಗೆ ನಮ್ಮ ದರಿದ್ರ ಶಿಕ್ಷಿತ ಜನರು ಫುಟ್ ಪಾತಿನಲ್ಲೇ ಬೈಕ್, ಸ್ಕೂಟರ್‌ಗಳನ್ನು ಓಡಿಸುತ್ತ, ಪಾದಚಾರಿಗಳಿಗೆ ಬೆದರಿಸುತ್ತ  ಹಾರುತ್ತಾರೆ. ನಾನು ಮಧ್ಯಾಹ್ನ ಜ್ಯೂಸ್ ಕುಡಿಲೆಂದು ಹೊರಗೆ ಬಂದಾಗ ಈ ಮನುಷ್ಯರನ್ನು ಅಡ್ಡಗಟ್ಟಿ ಬೈದಿದ್ದೂ ಇದೆ. ಇಲ್ಲಿನ ಪ್ರತಿಷ್ಠಿತ ಅಂಗಡಿಯವನೂ ತನ್ನ ದೊಡ್ಡ ಕುಂಡೆ ಕಾರನ್ನು ಫುಟ್‌ಪಾತ್ ಮೇಲೆಯೇ ನಿಲ್ಲಿಸುತ್ತಾನೆ. ಒಂದ್ಸಲ ಈ ವಾಹನಗಳ ಟಯರುಗಳನ್ನೆಲ್ಲ ಕತ್ತರಿಸಿಬಿಡಬೇಕು ಎನ್ನಿಸುತ್ತದೆ. ಅಲ್ಲಿ ಪೆಟ್ರೋಲ್ ಬಂಕಿನವನು `ಲೈಫ್ ಈಸ್ ಎ ಫೋರ್ ಲೆಟರ್ ವರ್ಡ್, ಸೋ ಈಸ್ ಸ್ಲೋ, ಡೆತ್ ಈಸ್ ಎ ಫೈವ್ ಲೆಟರ್ ವರ್ಡ್,ಸೋ ಈಸ್ ಸ್ಪೀಡ್’ ಎಂದು ಫಲಕ ಬರೆಸಿ ನಿಲ್ಲಿಸಿದ್ದಾನೆ,ಫುಟ್‌ಪಾತಿನ ಮೇಲೆ! ಅವನು ಈ ಸರ್ಕಲ್ಲಿನ ಮೂಲೆಯ ಹಾದಿಯನ್ನೆಲ್ಲ ತಿಂದು ಪೆಟ್ರೋಲ್ ಸಂಪ್ ಕಟ್ಟಿದ್ದಾನೆ. ಎದುರಿಗೆ ಇರೋ ಹೋಟೆಲಿನಲ್ಲಿ ನೀವು ಕಾಫಿ ಕೇಳಿದರೆ ಒಂದು ಜಡ್ಡುಗಟ್ಟಿದ ಕಪ್‌ನಲ್ಲಿ ಬಿಸಿ ದ್ರವ ಬರುತ್ತದೆ. ಪಕ್ಕದ ಝೆರಾಕ್ಸ್ ಅಂಗಡಿಯಲ್ಲಿ ಛಲೋ ಕಾಪಿ ಸಿಕ್ಕಿದರೆ ಪುಣ್ಯ.
ಇಂತೆಂಬ ನಾಡಿನ ಈ ಕಟ್ಟಡದ  ಈ ಮೂರನೇ ಮಹಡಿಯಲ್ಲಿ…… ನಾನು
ಇದ್ದೇನೆ.
ನಾನು ಕೆಲಸ ಮಾಡುತ್ತೇನೆ.
ನಾನು ಸಂಬಳ ತೆಗೆದುಕೊಳ್ಳುತ್ತೇನೆ.
ನಾನು ಸಿನೆಮಾ ನೋಡುತ್ತೇನೆ.
ನಾನು  ಚಾಟ್ ಮಾಡುತ್ತೇನೆ.
ನಾನು ಕಿಟಕಿಯಾಚೆ ನೋಡುತ್ತೇನೆ.
ಈ ಬದುಕಿನ ಬಗ್ಗೆ ನನಗೆ ತಲೆ ತಿರುಗುತ್ತದೆ.
—————————–
ಇಲ್ಲಿ ಎರಡು ಕುರ್ಚಿಗಳಿವೆ. ಒಂದರಲ್ಲಿ ನಾನೇ ಕೂತುಕೊಳ್ಳುವೆ. ಇನ್ನೊಂದು ವಿಸಿಟರ್‌ಗಾಗಿ. ಇಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ಆಂಟಿವೈರಸ್ ಕಿಟ್ ಮಾರುವವರು, ಮ್ಯೂಚುಯಲ್ ಫಂಡ್ ಮಾರುಕಟ್ಟೆ ಪರಿಣತರು, ಲೇಖಕರು, ಬ್ಯಾಂಕರ್‌ಗಳು, ಗೆಳೆಯರು, ಗೆಳತಿಯರು….
ಈ ಎಲ್ಲ ಮನುಷ್ಯರ ಥರಾನೇ ಕಾಣುವ ಆ ಹುಡುಗಿಯೂ ಅವತ್ತು ಇಲ್ಲಿ ಬಂದು ಕೂತುಕೊಂಡಿದ್ದಳು.
`ಸರ್, ನಾನು ಡಿಟಿಪಿ ಮಾಡ್ತೇನೆ. ಪೋಟೋಶಾಪ್, ಕೋರೆಲ್‌ಡ್ರಾ ಗೊತ್ತು ಆರ್. ನೀವು ತುಂಬಾ ಜನರಿಗೆ ಕೆಲಸ ಕೊಡಿಸ್ತೀರಂತೆ… ನಂಗೂ ಒಂದು ಕೆಲಸ ಕೊಡ್ಸಿ ಸಾರ್…’
ಕಣ್ಣಿಗೆ ರಾಚುವ ಹಸಿರು  ಚೂಡಿದಾರ್ ತೊಟ್ಟ ಆ ಹುಡುಗಿ ಈಗ ಬೆಂಗಳೂರಿನಲ್ಲಿ ಎಷ್ಟೆಲ್ಲ ಕಡೆ ಕೆಲಸ ಹುಡುಕಿರಬಹುದು ಎಂದು ಯೋಚಿಸಿದೆ.  ಕಚೇರಿಯ ಕೆಟ್ಟ ಟೀ ಬಂದಾಗ ಅವಳಿಗೂ ಒಂದು ಕಪ್ ಬಂತು.
`ನೋಡಿ, ಕೆಲಸ ಮಾಡೋರಿಗೆ ಕೆಲಸ ಇದ್ದೇ ಇರುತ್ತೆ. ನೀವು ಎಲ್ಲಿ ಉಳ್ಕೊಂಡಿದೀರ?’
`ಅಣ್ಣನ ಜೊತೆಗೆ ಇದೀನಿ ಸರ್. ಆತ ಯಶವಂತಪುರದಲ್ಲಿ ಫ್ಯಾಕ್ಟರಿಗೆ ಹೋಗ್ತಾನೆ.’
`ಅಲ್ರೀ, ಮಲ್ಲೇಶ್ವರ, ರಾಜಾಜಿನಗರದಲ್ಲಿ ಕೆಲಸ ಮಾಡೋದೇನೋ ಸುಲಭ. ಕೋರಮಂಗಲಕ್ಕೆ, ಜೆಪಿ ನಗರಕ್ಕೆ ಹೋಗಿ ಕೆಲಸ ಮಾಡೋದಕ್ಕಾಗುತ್ತ?’
`ಎಲ್ಲಾದ್ರೂ ಸರಿ ಸರ್. ಒಂದು ಕೆಲಸ ಸಿಕ್ಕಿದ್ರೆ ಸಾಕು.’
ಹತಾಶೆ ಇವಳನ್ನು ಎಷ್ಟೆಲ್ಲ ಆವರಿಸಿದೆ ಎಂದೆನಿಸಿತು. ಅವಳು ಕಿಟಕಿಗೆ ಮುಖ ಮಾಡಿ ಕೂತಿದ್ದರೆ, ನಾನು ಬೆನ್ನು ಮಾಡಿ ಕೂತಿದ್ದೆ. ನಾನು ದಿನಾಲೂ ಕಾಣುವ ದೃಶ್ಯಗಳನ್ನು ಅವಳು ಆಗಾಗ ನೋಡುತ್ತಿದ್ದಳು.
ಸರಿ ನಿಮ್ಮ ರೆಸುಮೆ ಕೊಡಿ ಅಂದೆ. ಒಂದು ಟೈಪ್ ಮಾಡಿದ ಹಾಳೆಯನ್ನು ಪರ್ಸಿನಿಂದ ತೆಗೆದು ಕೊಟ್ಟಳು.
ನಾನು ಅವರಿವರಿಗೆ ಕೆಲಸ ಕೊಡಿಸ್ತೇನೆ.
ಅವರ ಮಾತುಗಳನ್ನು ಕೇಳ್ತಾ ಕೇಳ್ತಾ ನಾನೂ ನನ್ನ ನಿರುದ್ಯೋಗದ ದಿನಗಳನ್ನು ನೆನಪಿಸಿಕೊಳ್ತೇನೆ.
ಅವರ ಜೊತೆ ಚಹಾ ಕುಡಿಯುತ್ತ ನನ್ನನ್ನೇ ನಾನು ಮತ್ತೆ ಬದುಕಿಗೆ ಕರೆದುಕೊಳ್ಳುತ್ತೇನೆ.
ಜನ ನನ್ನ ಭೇಟಿಗೆ ಬರೋದು ಅವರ ಸಮಸ್ಯೆಗಳನ್ನು ಸಾಲ್ವ್ ಮಾಡ್ಕೊಳ್ಳೋದಕ್ಕೆ ಅಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೋದಕ್ಕೆ. ಈ ಕುರ್ಚಿಯ ಮೇಲೆ ಗಂಟೆಗಟ್ಟಳೆ ಕೂತು ಮಾತಾಡಿದ ಮೇಲೆ ಹಾಗನ್ನಿಸಿದೆ. ಅವರು ಹೊರಟುಹೋದ ಮೇಲೆ ಕುರ್ಚಿಯನ್ನು ಮತ್ತೆ ಗೋಡೆಗೆ ಸರಿಸಿ ನನ್ನ  ಕಂಪ್ಯೂಟರಿನ ಫೈಲುಗಳ ಸಂತೆಯಲ್ಲಿ ಕರಗಿಹೋಗುತ್ತೇನೆ.
ನಾನು ಇಲ್ಲಿ ಯಾವಾಗಲೂ ಮಾತನಾಡುತ್ತೇನೆ.
ಮನುಷ್ಯರ ಜೊತೆಗೆ ಅಥವಾ ಭ್ರಮಾನ ಚಹರೆಗಳ ಜೊತೆಗೆ.  ಅಥವಾ ಕಿಟಕಿಯಾಚೆ ಇರೋ ಅಚಲ ದೃಶ್ಯಗಳ  ಜೊತೆಗೆ.
………………………
`ನೀವು ಇಲ್ಲಿ ಫೋಟೋ ಪ್ರಿಂಟ್ ಹಾಕ್ಸೋದಾದ್ರೆ ನನ್ನ ನಂಬರ್  ತಗೊಳ್ಳಿ. ಸಿಕ್ಕಾಪಟ್ಟೆ ಕನ್ಸೆಶನ್ ಸಿಗುತ್ತೆ’ ಎಂದು ರಾಮಚಂದ್ರ ಹೇಳುತ್ತಿದ್ದ ಹಾಗೆ ನಾನೂ ಯಾಕೆ ಒಂದು ಡಿಜಿಟಲ್ ಕ್ಯಾಮೆರಾ ತಗೋಬಾರ್‍ದು ಎನ್ನಿಸಿತ್ತು. ಈ ರಸ್ತೆಯ ಎಲ್ಲ ದೃಶ್ಯಗಳನ್ನು ಹಾಗೆಯೇ ಸಾವಿರಾರು ಫ್ರೇಮುಗಳಲ್ಲಿ ಹಿಡಿಯಬೇಕು. ಫುಟ್‌ಪಾತ್ ಮೇಲೆ ಬೈಕ್ ಓಡಿಸೋ ಲಾಯರುಗಳ ಮುಖ – ತಿಕ ಎಲ್ಲವನ್ನೂ ದಾಖಲಿಸಿ ಪೇಪರಿಗೆ  ಕಳಿಸಬೇಕು. ಇಲ್ಲಿ ನಿಲ್ಲಿಸಿರೋ ಕಾಂಟೆಸ್ಸಾ ಕಾರಿನ ಫೋಟೋ ತೆಗದು ಪೊಲೀಸ್ ಕಮಿಶನರ್‌ಗೆ ಕಳಿಸಿ   ಏನ್ರೀ, ನಿಮಗೇನಾದರೂ ದಮ್ಮಿದ್ರೆ  ಈ ಕಾರನ್ನು ಎಳ್ಕೊಂಡು ಹೋಗ್ರೀ ಅಂತ ಹೇಳಬೇಕು…
ನಾನು ವ್ಯವಸ್ಥೆಯನ್ನು ಪ್ರತಿಭಟಿಸ್ತೇನೆ.
ನಾನು ನಿರಂತರವಾಗಿ ವಾಚಕರ ವಾಣಿ ಬರೆಯುತ್ತೇನೆ. ಈ ಮೈಲ್ ಕಳಿಸುತ್ತೇನೆ.
ನಾನು ರೆಬೆಲ್.
………………………
ಇವತ್ತು ಬಂದ ಆ ಗೆಳೆಯನಿಗೆ ಸಾಲ ಬೇಕು. ತಿಂಗಳಿಗೆ ಮೂರು ಪರ್ಸೆಂಟ್ ಬಡ್ಡಿಯಾದರೂ ಪರವಾಯಿಲ್ಲ. ಆರು ತಿಂಗಳಿಂದ ಬರೀ ಬಡ್ಡಿ ಕೊಡ್ತಾ ಬಂದಿದಾನೆ. ಮೊನ್ನೆ ಬಂದಿದ್ದ. ಯಾಕೆ ಅಸಲನ ಕೊಡಬಹುದಿತ್ತಲ್ವ ಎಂದೆ. `ಇಲ್ಲ ಗುರು, ಬಡ್ಡೀನೇ ಕೊಡ್ತಾ ಇದ್ರೆ ಸರಿ. ಯಾಕಂದ್ರೆ ನಿನ್ನ ಸಾಲದ ಮೇಲೆ ಇದಕ್ಕಿಂತ ಹೆಚ್ಚು ದುಡೀತಾ ಇದೀನಿ’.
`ಅಂದ್ರೆ, ಯಾವ್ದಾದ್ರೂ ಅಂದರ ಬಾಹರ್?’
`ಛೀ, ಹಾಗೆಲ್ಲ ನನ್ನ ಮೇಲೆ ಅನುಮಾನ ಪಡೋದಕ್ಕಾಗುತ್ತ? ನನ್ನ ಅಪ್ಪನೇ ಚೀಟಿ ವ್ಯವಹಾರದಲ್ಲಿ ೩ ಲಕ್ಷ ರೂಪಾಯಿ ಕೊಟ್ಟು ನಾಮ ಹಾಕಿಸ್ಕೊಂಡಿದಾರೆ.  ನಾನು ಈಗ ಶೇರು ಮಾರ್ಕೆಟ್‌ನಲ್ಲಿ ನೀನು ಕೊಟ್ಟ ಹತ್ತು ಸಾವಿರ ರೂಪಾಯಿ ಹಾಕಿದೇನೆ. ಐ ಸಿ ಐ ಸಿ ಐ ಬ್ಯಾಂಕಿನಲ್ಲಿ ಡಿಮ್ಯಾಟ್ ಅಕೌಂಟ್ ಇದೆ. ಆನ್‌ಲೈನ್‌ನಲ್ಲೇ ಎಲ್ಲ ವ್ಯವಹಾರ. ನನ್ನ ಒಬ್ಬ ಫ್ರೆಂಡ್ ನನಗೆ ಇದಕ್ಕೆಲ್ಲ ಅಡ್ವೈಸ್ ಮಾಡ್ತಾನೆ.’
ಬೆಂಗಳೂರಿನಲ್ಲಿ ಇದೂ ಒಂದು ಥರ ದುಡಿಮೆಯೇ. `ನೋಡಿ, ಈ ಮೊಬೈಲ್, ಈ ಬೇ ಆಕ್ಷನ್ ವೆಬ್‌ಸೈಟ್‌ನಲ್ಲಿ ಖರೀದಿ ಮಾಡ್ದೆ. ಎರಡು  ಸಾವಿರ ರೂಪಾಯಿ ಸೇವ್ ಆಯ್ತು. ಪ್ರಾಂಪ್ಟ್ ಆಗಿ ಮೂರೇ ದಿನಕ್ಕೆ ಪಾರ್ಸೆಲ್ ಬಂತು’
………………………
ಇಲ್ಲೊಂದು ಪ್ರೆಸ್ ಇದೆ. ನೋಡಿದರೆ ಹತ್ತಾರು ಬೋರ್ಡುಗಳು ನಿಮ್ಮನ್ನು ಕರೆಯುತ್ತವೆ.  ಇನ್‌ಸ್ಟಂಟ್ ವಿಸಿಟಿಂಗ್ ಕಾರ್ಡ್ , ಲೆಟರ್‌ಹೆಡ್ ಇಲ್ಲಿ ಸಿಗುತ್ತೆ. ಅಥವಾ ಯಾವುದೇ ಪ್ರಿಂಟಿಂಗ್ ಕೆಲಸಾನ ಒಂದೆ ದಿನದಲ್ಲಿ ಮಾಡಿಸಿಕೊಳ್ಳಬಹುದು. ಆದ್ರೆ ನಾನು ಇಲ್ಲಿ  ವಿಚಾರ ಸಂಕಿರಣದ ಫೈಲನ್ನ ಡಿಜಿಟಲ್ ಪ್ರಿಂಟ್ ತೆಗೆಸಿಕೊಳ್ಳೋದಕ್ಕೆ ಹೋದ್ರೆ ಅವರಿಗೆ ನನ್ನ ಓಪನ್ ಮಾಡೋದಕ್ಕೇ ಬರಲ್ಲ.
ನಾನು ಅವರಿಗೆ ಪೇಜ್‌ಮೇಕರ್, ಪೋಸ್ಟ್ ಸ್ಕ್ರಿಪ್ಟ್,  ಪಿ ಡಿ ಎಫ್,ಟಿಫ್ – ಇತ್ಯಾದಿ ಕಂಪ್ಯೂಟರ್ ಭಾಷೆಯಲ್ಲಿ  ವಿವರಿಸಲು ಹೆಣಗುತ್ತೇನೆ.  ಅವರು ಫೈಲನ್ನು ಓಪನ್ ಮಾಡಲು ಎಲ್ಲಾ ಕಂಪ್ಯೂಟರುಗಳಲ್ಲೂ  ಯತ್ನಿಸಿ ಸೋಲುತ್ತಾರೆ. ನಾನು ಮತ್ತೆ ಅದಕ್ಕಾಗಿ ಚಾಮರಾಜಪೇಟೆಗೆ ಹೋದರೆ ಅಲ್ಲಿ ಮೆಶಿನ್ ಬ್ರೇಕ್‌ಡೌನ್ ಆಗಿರುತ್ತೆ.
ಇಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಆದಾಗ ಎದುರಿಗಿರೋ ಇಂಟರ್‌ನೆಟ್ ಕೆಫೆಗೆ ಹೋದರೆ ಅಲ್ಲಿ ರಿನೋವೇಶನ್ ನಡೀತಾ ಇದೆ.
ಇಲ್ಲಿ ಮನೆಯ ಫ್ರಿಜ್ಜಿಗೆ ವೋಲ್ಟೇಜ್ ಸ್ಟೆಬಿಲೈಸರ್ ಕೊಂಡರೆ ಅದರ ಪ್ಲಗ್ ಸರಿಯಾಗಿರುವುದಿಲ್ಲ. ನಾನು ಅಂಗಡಿಯವರಿಗೆ ಅರ್ಥವಾಗೋ ಹಾಗೆ ಕನ್ನಡ ಮಾತನಾಡಬೇಕು ಅಂದ್ರೆ ಮಲಯಾಳಂ ಕಲಿಯಬೇಕು.
ನಾನು ಹತಾಶೆಯನ್ನು ಬೆಳೆಸಿಕೊಂಡಿಲ್ಲ. ಬೇಕರಿಯಲ್ಲಿ ೫ ರೂ. ಕೊಟ್ಟು ಸಾಫ್ಟೀ ತಿನ್ನುತ್ತ ಸಿಗ್ನಲು ದಾಟುತ್ತೇನೆ.
ಮತ್ತೆ ಕಿಟಕಿಯ ಪಕ್ಕ ಕೂತು ಈ ದೇಶದ ಬಗ್ಗೆ ಚಿಂತಿಸುವ ಪೋಸು ಕೊಡುತ್ತೇನೆ. ಇಲ್ಲಿ ಹಾರುತ್ತಿರೋ ಪಾರಿವಾಳಗಳಿಗೆ ನನ್ನ ಚಿಂತನೆಗಳು ಗೊತ್ತಾಗಲ್ಲ. ಬಚಾವ್.
………………………
`ನೀವು ಈ ಕಾರ್ಯಕ್ರಮಕ್ಕೆ ಬರಲೇಬೇಕು.  ನೀವು ಏನು ಹೇಳಿದ್ರೂ ಪರವಾಯಿಲ್ಲ.’
ರಮೇಶ್ ಆಪ್ತಸಲಹೆ  ನೀಡುವವರಿಗೆ ತರಬೇತಿ ಕೊಡುತ್ತಾರೆ. ಈ ಬ್ಯಾಚಿನಲ್ಲಿ ಹತ್ತು ಜನ ಇದ್ದಾರೆ. ಅವರಿಗೆ ನಾನೇ ಸರ್ಟಿಫಿಕೇಟ್ ಕೊಡಬೇಕು. ಅವರಿಗೆ ಉಪದೇಶ ಹೇಳಬೇಕು.
`ನೋಡಿ ನಾನು ಕಲಿತದ್ದೆಲ್ಲ ಹೀಗೆ, ಅನುಭವದಿಂದ. ನಾನು ನೋಡಿ ಹೀಗೆ ಬೆಳೆದೆ… ಹಾಗೆ ಬರೆದೆ…. ನೋಡಿ, ನಾನು ಹೇಗೆ ದೊಡ್ಡ ಮನುಷ್ಯನಾದೆ…..’ ಒಂದು ಗಂಟೆ ಮಾತಾಡಿದ್ದೇ ಗೊತ್ತಾಗಲಿಲ್ಲ. ಸ್ವಂತದ್ದರ ಬಗ್ಗೆ ಹೇಳಿಕೊಳ್ಳೋದಕ್ಕೆ ನಾಚಿಕೆ ಇದ್ದರೆ ತಾನೆ?
ಆಮೇಲೆ ಕೆಲವರು ಆಟೋಗ್ರಾಫ್ ಬರೆಸಿಕೊಂಡಗ ನಗು ಬಂತು.
ಈ ಊರಿನಲ್ಲಿ ನಾನು ಚಿಂದಿ – ಚಿತ್ರಾನ್ನವಾಗಿದ್ದೆ.  ಆಗ  ರಮೇಶ್ ನನ್ನನ್ನು ಹಗೂರ ಎತ್ತಿಕೊಂಡಿದ್ದವರು. ನನಗೆ ಸಾಂತ್ವನ ಹೇಳಿದವರು. ನನಗೆ ಬೆಂಗಳೂರಿನಲ್ಲಿ ಇದ್ದೂ ಇಲ್ಲದವರ ಹಾಗೆ ಇರುವ ಬಗೆಯನ್ನು ತಿಳಿಸಿದವರು. ವಸಂತನಗರದಲ್ಲಿ ಅವರ ಮನೆಯ ಆ ಹಾಲ್‌ನಲ್ಲೇ ನಾನು ಎಷ್ಟೋ ಬಾರಿ ಅತ್ತಿದ್ದೇನೆ. ಅವರ ಹೆಂಡತಿ ನನಗೆ ಸಮಾಧಾನ ಹೇಳಿದ್ದಾರೆ.
………………………

ಮತಿಘಟ್ಟ ಜಲಪಾತ.  ಸರಸರ ಎಲ್ಲರೂ ಇಳಿಯುತ್ತಿದ್ದಾರೆ. ನನ್ನ ಚಪ್ಪಲಿಯನ್ನು ತೆಗೆದು ಕರ್ಚಿಫಿನಿಂದ ಕಟ್ಟಿಕೊಂಡಿದ್ದೇನೆ. ರಮಾ ಅಲ್ಲಿ ಹ್ಯಾಗೆ  ಸಲೀಸಾಗಿ ಇಳಿಯುತ್ತಿದ್ದಾಳೆ.   ಮಾತನಾಡಲೇ ಅಂಜುವ ರಮಾ ಇಲ್ಲಿ ತನ್ನೆಲ್ಲ ಜೀವವೇ ಇಲ್ಲಿ ಅರಳಿದ ಹಾಗೆ ಇಳಿಯುತ್ತಿದ್ದಾಳೆ. ಕಾರ್ಟೂನಿಸ್ಟ್ ರಂಗಣ್ಣ ಅಲ್ಲಿ ಯಾವುದೋ ಜೋಕ್ ಹೇಳುತ್ತ `ಬರ್ರೋ’ ಎಂದು ಕಿರುಚುತ್ತಿದನೆ.
ನಾನು ಇಳಿಯುತ್ತ ಇಳಿಯುತ್ತ ಯೋಚಿಸುತ್ತೇನೆ. ಇಲ್ಲಿ ತಲೆ ತಿರುಗಿದರೆ ಸರಿ, ಸೀದಾ ಪ್ರಪಾತಕ್ಕೆ ಬಿಳುತ್ತೇನೆ.
ಇಲ್ಲ. ನಾನು ಇಳಿದೆ. ಜಲಪಾತ ನೋಡಿದೆ. ಸಂಜೆಯ ಸೂರ್ಯ ಕಷ್ಟಪಟ್ಟು ಕೆಲವೆಡೆ ಇಣುಕಿದ್ದ. ಜಲಪಾತದ ಸಂಭ್ರಮ ಕಂಡಮೇಲೆ ಎಲ್ಲ ಟ್ರೆಕರ್‌ಗಳ ಹಾಗೆ  ನಾನೂ ತಣ್ಣಗಾಗಿದ್ದೇನೆ.
ಆದರೆ ಮತ್ತೆ ಅದೇ ಸ್ಲೋಪ್ ಕಂದರ ಹತ್ತಬೇಕಲ್ಲ…
ಇಲ್ಲ. ಈ ಸಲ ನಾನು ಸೋಲಲಾರೆ. ಈ ತಲೆತಿರುಗುವುದು ಇಲ್ಲಿಗೇ ಕೊನೆಯಾಗಬೇಕು. ನಾನು ಯಾಣಕ್ಕೆ ಹೋಗಿ  ಅಲ್ಲಿ ನನ್ನೆಲ್ಲ ರೋಗಗಳನ್ನು ಎಸೆದು ಬರಬೇಕು. ಹಿಂತಿರುಗಿ ನೋಡದೆ…. ಭೈರವೇಶ್ವರ ನನ್ನ ಮೇಲೆ ದಯೆ ತೋರಬಹುದು.
………………………

ಸಾಗರದ ಚಿಕ್ಕಮಾರಿಗುಡಿ. ಭಾವ ಅಲ್ಲಿ `ನೀರುಂ ನಿರುಪ್ಪುಂ’ ಸಿನೆಮಾ ನೋಡಲು ಕೃಷ್ಣಾ ಥಿಯೇಟರಿಗೆ ಹೋಗಿದ್ದಾನೆ. ನಾನು ಅಣ್ಣನ ಜೊತೆ ಅಲ್ಲೇ ಕಟ್ಟೆಯಲ್ಲಿ ಕೂತಿದ್ದೇನೆ.
ಅಲ್ಲಿಗೆ ಒಂದು ಮಾಟಗಾರರ ತಂಡ ಬಂದಿದೆ. ಜನ ಮುತ್ತಿಕೊಳ್ಳುತ್ತಿದ್ದಾರೆ. ಅವರು ಅಂಜನ ಹಾಕುತ್ತಾರೆ. ಯಾರ ಜೇಬಿನಲ್ಲಿ ಏನಿದೆ ಎಂದು ಕಣ್ಣು ಕಟ್ಟಿಕೊಂಡಾತ ಹೇಳುತ್ತಾನೆ. ನಾನು ನೋಡುತ್ತಲೇ ಇದ್ದೇನೆ. ಇಡೀ ಗುಂಪೇ ಗರಗರ ತಿರುಗುತ್ತಿದೆ. ಇಡೀ ಮಾರಿಗುಡಿ ನನ್ನ ತಲೆಮೇಲೆ ಬೀಳುತ್ತಿದೆ.  ಆಕಾಶವೇ ಕಿಟಕಿಯ ಹಾಗೆ,ಅದರಲ್ಲಿ ಯಾವುದೋ ಮೋಡಗಳು ಸಿಕ್ಕಿಕೊಂಡ ಹಾಗೆ ಕಾಣಿಸುತ್ತಿದೆ.
ಮತ್ತೆ ಮೈ ಮರೆತಿದ್ದೇನೆ. ಎಚ್ಚರವಾದರೆ ಮೈಯೆಲ್ಲ ಒದ್ದೆ.
………………………

ಗರಬಡಿಯುವ ಹಾಗಿದೆ ಈ ಬದುಕು .
ನಾನು ಹೇಗೋ ಇಷ್ಟು ದಿನ ಬದುಕಿದ್ದೇ ಹೆಚ್ಚು.
ನಗರ ನಗರ ನಗರ ನಗರ ನಗರ.
ನಾನು ನಾನು ನಾನು ನಾನು ನಾನು.
ರಸ್ತೆ, ಸಿಗ್ನಲು, ಅಂಡರ್‌ಪಾಸ್, ಮೆಟ್ರೋ. ಮಲ್ಟಿ ಲೆವೆಲ್ ಪಾರ್ಕಿಂಗ್.
ಲಿಫ್ಟ್. ಮಲ್ಟಿಪ್ಲೆಕ್ಸ್. ಪಬ್. ಮಾಲ್.
ಗೋಬಿ ಮಂಚೂರಿ, ಚಿಕನ್ ಬಿರಿಯಾನಿ, ಮಸಾಲೆ ದೋಸೆ, ಬೆಣ್ಣೆ ಗುಲ್ಕನ್, ಗಣೇಶ ಹಣ್ಣಿಸ ರಸ.
ಎಲ್ಲವೂ ಯಾಕೋ ಕಲಸಿಹೋಗುತ್ತಿವೆ. ನಾನು ಚಿಕನ್ ಬಿರಿಯಾನಿ ತಿನ್ನುತ್ತ ಸಿಗ್ನಲ್ ದಾಟಬೇಕು. ಮಲ್ಟಿಲೆವೆಲ್ ಪಾರ್ಕಿಂಗ್‌ನಲ್ಲಿ ಸ್ಕೂಟರ್ ನಿಲ್ಲಿಸಬೇಕು. ಸಿಗ್ನಲಿನಲ್ಲಿ ಚೌರಸಿಯಾ ಜೋಡ್ ಜಾಲ್ ಗುನುಗುನಿಸಬೇಕು.
ನಾನು ಈ ಬಿಲ್ಡಿಂಗಿನ ಈ ಕಿಟಕಿಯ ಈ ಬಾಗಿಲಿನಂಥ ಅವಕಾಶದಲ್ಲಿ ಹೀಗೇ ನಡೆಯುತ್ತ ಹೋಗಬೇಕು.
ನಾನು  ಉಳಿದವರ ಬಗ್ಗೆ ಸಲಹೆ, ಸೂಚನೆ, ಗೈಡೆನ್ಸ್, ಸಹಾಯ, ಹೆಲ್ಪ್,ಫೇವರ್ ಮಾಡುವ ಬದಲು….
ಸುಮ್ಮನೆ ಈ ಆಕಾಶದಲ್ಲಿ, ಈ ಧೂಳಿನಲ್ಲಿ, ಕರಗಿಹೋಗಬೇಕು.
ಅಲ್ಲಿ ಇಲ್ಲಿ ಬದುಕಿನ ಕಂದರದಲ್ಲಿ ಬೀಳುವುದಕ್ಕಿಂತ ಹೀಗೆ ಒಂದೇ ಸಲ  ಆಕಾಶಕ್ಕೆ ಚಿಮ್ಮಬೇಕು. ಮತ್ತೆ ಮತ್ತೆ ಅನ್ನಿಸುತ್ತಿದೆ…. ನಾನು ಎಂದೆಂದೂ ಎಚ್ಚರವಾಗದ ಸ್ಥಿತಿಗೆ ಹೋಗಬೇಕು.
………………………
ಮತ್ತೆ ಕೆಳಗಿಳಿದು ಫುಟ್‌ಪಾತಿನಲ್ಲಿ ನಡೆದೆ. ಸಾಫ್ಟೀ ತಿಂದೆ.  ಅವರ ಇವರ ಫೋನು, ಗೌಜು.
ಮತ್ತೆ ಮೇಲೆ ಹತ್ತಿದೆ. ಮತ್ತೆ ಚಾಟ್. ಮತ್ತೆ ಡೌನ್‌ಲೋಡ್. ಅದೇ ಜಂಕ್ ಮೈಲ್ ; ಮಿಸ್ಡ್ ಕಾಲ್.
ಮತ್ತೆ ಮತ್ತೆ ದಿನ ಮರುಕಳಿಸುತ್ತಿದೆ. ಮತ್ತೆ ಮತ್ತೆ ಅದೇ ಕ್ಷಣಗಳು ಯಾಕೆ ನನ್ನನ್ನು ಹಿಂಡುತ್ತಿವೆ….
ನಾನು ಮತ್ತೆ ಈ ಕಿಟಕಿಯನ್ನೇ ನೋಡುತ್ತೇನೆ. ಹಾಗೇ ಸರಿದುಬಿಟ್ಟರೂ ಗಾಳಿಯಲ್ಲಿ ತೇಲಬಲ್ಲೆ. ಆದರೂ ಹಾಗಾಗಿಲ್ಲ.
ಎಲ್ಲೋ ಬರೆದಿದ್ದೆ: ನಂಬುಗೆಯ ಕರ್ಟನುಗಳೇ ಕಂಪಿಸುತ್ತಿವೆ….. ಇಲ್ಲ. ಇಲ್ಲಿ ಕರ್ಟನನ್ನು ಗಾಜಿನ ಬಾಗಿಲಿಗೆ ಸಿಕ್ಕಿಸಿದ್ದೇನೆ.
ನನ್ನ ಬದುಕೂ ಭ್ರಮೆಯ ಗಾಜಿಗೆ ಸಿಕ್ಕಿಕೊಂಡಿದೆ.  ಗಾಜೇ ಕಿಟಕಿ.
ನಾನಿನ್ನು ಯಾರ ಬದುಕಿನ ಕಿಟಕಿಯಲ್ಲೂ ಇಣುಕಲಾರೆ.
ನನಗೆಲ್ಲೂ ಆಕಾಶ ಕಾಣಿಸುತ್ತಿಲ್ಲ.
ಕಂಪ್ಯೂಟರ್ ಪರದೆಯ ಮೇಲೂ ಭ್ರಮಾನ ಜಗತ್ತಿನ ಕನಸುಗಳ ಕೂಸುಗಳಿಗಾಗಿ ಒಂದು ಆಕಾಶವಿದೆ.ಅದಕ್ಕೊಂದು ಕಿಟಕಿಯಿದೆ.
ಎಂಥ ದರಿದ್ರ ಸ್ಥಿತಿಗೆ ನಾನಿಳಿದಿದ್ದೇನೆ. ಇಲ್ಲಿರೋ ಕಿಟಕಿಗಳಲ್ಲಿ ನನ್ನದು ಯಾವುದು? ಗೊತ್ತಿಲ್ಲ.
ಅಥವಾ ಈ ಕಿಟಕಿಯೇ ಬಾಗಿಲೆ?

Leave a Reply

Your email address will not be published. Required fields are marked *

nine − five =

This site uses Akismet to reduce spam. Learn how your comment data is processed.