ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ

ಗೋವಿಂದರಾಯರ ಬದುಕಿನ ಬಗ್ಗೆ ಹೆಚ್ಚು ಬರೆಯಲು ಏನೂ ಇಲ್ಲ. ಏಕೆಂದರೆ ಅವರು ತಮ್ಮ ಜೀವಿತದ ಬಹುಪಾಲು ಕಾಲಾವಧಿಯನ್ನು  ಸರಳ ದಿನಚರಿಯಲ್ಲೇ ಕಳೆದರು. ದಿನಪತ್ರಿಕೆ ಬಿಟ್ಟರೆ ಬೇರೆ ಪುಸ್ತಕಗಳನ್ನು ಓದುವುದೇ ಕಡಿಮೆ. ಮನೆಗಾಗಿ ತರಕಾರಿ ತರುವುದು, ಮಾವಿನ ರಸಾಯನ ಮಾಡುವುದು, ಐಸ್‌ಕ್ರೀಮ್‌ ಮಾಡಿ ಫ್ರಿಜ್ಜಿನಲ್ಲಿ ಇಡುವುದು – ಇಂಥ ಮನೆಯ ಚಿಕ್ಕಪುಟ್ಟ ಕೆಲಸಗಳಲ್ಲೇ ಆತ್ಮತೃಪ್ತಿ ಹೊಂದಿದ ಜೀವ ಅವರದು.  ಅವರಿಗೆ ಯಾವ ಗಮನಾರ್ಹ ಹವ್ಯಾಸವಾಗಲೀ, ಸ್ಮೋಕಿಂಗ್‌ ಇತ್ಯಾದಿ ಚಟವಾಗಲೀ – ಎರಡೂ ಇರಲಿಲ್ಲ.

ನನ್ನ ಮಾವ ಗೋವಿಂದರಾಯರು ನಿಧನರಾಗಿ ಮೂರು ವರ್ಷಗಳಾದವು. ಮೊನ್ನೆ ರಾಯಚೂರಿಗೆ ಹೋಗಿ ಬಂದಮೇಲೆ ಅವರ ನೆನಪು ನನ್ನನ್ನು ತೀವ್ರವಾಗಿ ಸುತ್ತಿಕೊಂಡಿತು. ಇದು ಅವರಿಗೆ ನಾನು ಸಲ್ಲಿಬಹುದಾದ ಕಿರು ಶ್ರದ್ಧಾಂಜಲಿ.

govindrao blog

ಗೋವಿಂದರಾಯರು  ಮೂಲತಃ ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಹುಟ್ಟಿದವರು; ರೆವಿನ್ಯೂ ಇಲಾಖೆಯಲ್ಲಿ  ಸರ್ಕಾರಿ ಸೇವೆ  ಸೇರಿ ಸಿಂಧನೂರಿನಲ್ಲಿ  ನಿವೃತ್ತರಾದ ನಂತರ, ೧೯೯೧ರಲ್ಲಿ ನಾನು ಅವರ ಅಳಿಯನಾಗುವ ಹೊತ್ತಿಗೆ ಅವರು ರಾಯಚೂರು ಸೇರಿದ್ದರು.

ನೀವು ಅವರನ್ನು ನೋಡಿದರೆ ಎಂಥ ಖಡಕ್‌ ಅಧಿಕಾರಿ ಇದ್ದಿರಬಹುದು ಎಂದು ಭಾವಿಸಬಹುದು. ಅವರ ಸರ್ವಿಸ್‌ ದಿನಗಳ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ ಅವರೆಂದೂ ಜನರನ್ನು, ಸಿಬ್ಬಂದಿಯನ್ನು ನೋಯಿಸಿದವರಲ್ಲ; ಎಂದೂ ಕೆಟ್ಟ ಮಾತುಗಳನ್ನಾಡಿದವರಲ್ಲ  ಎಂಬುದು ಅವರೊಂದಿಗೆ ಇಪ್ಪತ್ತು ವರ್ಷ ಒಡನಾಡಿದ ನನ್ನ ಖಚಿತ ಅಭಿಮತ.

ನನ್ನ ಮದುವೆಯ ಸಂದರ್ಭದಲ್ಲಿ  ಅವರ ಕುಟುಂಬದ ಎಲ್ಲಾ ಸದಸ್ಯರೂ ಬಂದಿದ್ದರು; ಒಬ್ಬರೂ ತಪ್ಪಿಸಿರಲಿಲ್ಲ ಎಂದು ಆನಂತರದ ಕಾರ್ಯಕ್ರಮಗಳಲ್ಲಿ ಸಂಬಂಧಿಕರೆಲ್ಲ ಮಾತಾಡಿಕೊಳ್ಳುತ್ತಲೇ ಇರುತ್ತಾರೆ. ಅದು ನಿಜ. ನಾನು ಭಾಗವಹಿಸಿದ ಹಲವು ಮಂಗಳ ಕಾರ್ಯಗಳಲ್ಲಿ ಕೆಲವು ಪ್ರಮುಖ ಸಂಬಂಧಿಕರೇ ಬರಲಾಗಿರಲಿಲ್ಲ. ನನ್ನ ಮದುವೆಗೆ ಹೀಗೆ ಎಲ್ಲರೂ ಬರಲು ಕಾರಣ: ಗೋವಿಂದರಾಯರ ಶಿಸ್ತಿನ ಆಹ್ವಾನ (ಅವರ ಮಕ್ಕಳ ಪೈಕಿ ಮೊದಲ ಮದುವೆ ಎಂಬುದೂ ಹೌದೆನ್ನಿ).

ನಾನು ರಾಯಚೂರಿಗೆ ಹೋದಾಗಲೆಲ್ಲ ಅವರು ನಿವೃತ್ತರಾಗಿಯೂ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕ್ಯಾನ್ಸರ್‌ ರೋಗ ಉಲ್ಬಣಿಸುವವರೆಗೂ ಅವರು ನಿಶ್ಚಿಂತರಾಗಿ ರಾಯಚೂರಿನ ಆಸ್ಪತ್ರೆಯೊಂದರ ನಿರ್ವಹಣೆ ವಹಿಸಿಕೊಂಡಿದ್ದರು; ತಮ್ಮದೇ ವಾಹನದಲ್ಲಿ ಹೋಗಿ ಬರುತ್ತಿದ್ದರು.

ಇವೆಲ್ಲ ಕೊಂಚ ಖಾಸಗಿ ಸಂಗತಿಗಳೇ. ಎಂದು ನೀವು ಕಾಮೆಂಟ್‌ ಮಾಡುವ ಮುನ್ನವೇ  ಹೇಳುವುದಾದರೆ,  ಅವರ ಸಾರ್ವಜನಿಕ ಜೀವನ ನಿಷ್ಕಳಂಕವಾಗಿತ್ತು. ತಾಲೂಕಾಫೀಸಿನ  ಭ್ರಷ್ಟಾಚಾರಗಳೆಲ್ಲ  ನಿಮಗೆ ಗೊತ್ತಿದ್ದದ್ದೇ. ಅವರು ಎಂದೂ ಸಾರ್ವಜನಿಕರ ಕಾಸಿಗೆ ಕೈ ಚಾಚಲಿಲ್ಲ; ತಮ್ಮ ಸಂಬಳದಲ್ಲೇ ಜೀವನದುದ್ದಕ್ಕೂ ಬಾಳಿದರು. ಎಂಥ ಸರ್ವಿಸ್‌ ಇವರದು, ಒಂದು ಮನೆಯನ್ನೂ ಕಟ್ಟಿಕೊಳ್ಳಲಿಲ್ಲ ಎಂದು ಅವರ ಓರಗೆಯ ಹಲವು ಹೇಳಿದ್ದನ್ನು ನಾನು ಕೇಳಿದ್ದೇನೆ. ಆದರೆ ಗೋವಿಂದರಾಯರದು ನಿರ್ಮಲ ಮನಸ್ಸು. ದುಡಿದಷ್ಟೇ ಸುಖಿಸುವ ಹೂ ಮನಸ್ಸು. ಇಂಥ ವ್ಯಕ್ತಿ, ನಾನು ಪದೇ ಪದೇ ಕೆಲಸ ಬಿಡುವುದನ್ನು ನೋಡಿ ಖಿನ್ನರಾಗುತ್ತಿದ್ದರು. ಆದರೂ ಅಳಿಯ ಎಂಬ ಗೌರವದಿಂದ `ಹೌದೇನ್ರಿ? ಈ ಕೆಲ್ಸ ಸೆಕ್ಯೂರ್‌ ಆಗಿದೆಯ? ಪಿ ಎಫ್‌ ಸಿಗುತ್ತ?’ ಎಂದು ನಗುನಗುತ್ತಲೇ ಪ್ರಶ್ನಿಸುತ್ತಿದ್ದರು. ಸುಮಾರು ಐದು ಸಲ ಇಂಥ ಚರ್ಚೆ ನಡೆದ ಮೇಲೆಯೂ ನಾನು ಮನೆಗೆ ಬೇಕಾದಷ್ಟು ದುಡಿಯುತ್ತಿರುವುದನ್ನು ಕಂಡ ಅವರು ಮತ್ತೆ ಸೆಕ್ಯೂರಿಟಿ ಬಗ್ಗೆ ಕೇಳಲಿಲ್ಲ.

ಗೋವಿಂದರಾಯರು  ಸ್ವಾತಂತ್ರ್‍ಯ ಹೋರಾಟದಲ್ಲೂ ಭಾಗವಹಿಸಿದವರು. ಹೈದರಾಬಾದ್‌ ಪ್ರಾಂತ್ಯದ ಪ್ರಭಾವದಿಂದಾಗಿ ಉರ್ದು ಭಾಷೆಯನ್ನು ಓದಲು,ಬರೆಯಲು, ಮಾತನಾಡಲು ಕಲಿತಿದ್ದರು. ಒಮ್ಮೆ ನಾನು ಇಂಟರ್‌ನೆಟ್‌ನಿಂದ ಹಿಂದುಸ್ತಾನಿ  ಲಿಸಾನಿಯತ್ ಎಂಬ ಉರ್ದು ಭಾಷೆಯ ಹಿಂದುಸ್ತಾನಿ ಸಂಗೀತದ ಪುಸ್ತಕವನ್ನು ಡೌನ್‌ಲೋಡ್‌ ಮಾಡಿ ತೋರಿಸಿದಾಗ ಖುಷಿಯಿಂದ ಕೆಲವು ಸಾಲುಗಳನ್ನು ಓದಿದ್ದರು.

ರೋಗ ಉಲ್ಬಣಿಸುವ ಮುನ್ನ ಹಲವು ಬಾರಿ ಬೆಂಗಳೂರಿಗೆ ಬಂದಿದ್ದ ಅವರು ಬನಶಂಕರಿಯ ಡಿವಿಜಿ ಪಾರ್ಕಿನಲ್ಲಿ ಮೂರು ತಾಸು ಕೂರುತ್ತಿದ್ದರು.  ಅವರಿಗೆ ಅನ್ನನಾಳದ ಕ್ಯಾನ್ಸರ್‌ ಆಗಿ ಗಂಟಲು ಪರೀಕ್ಷೆ ಮಾಡುವ ಮೊದಲ ದಿನ ಮುಂಜಾನೆಯೇ ಎದ್ದು ತಯಾರಾದ ಅವರು ಮುಂಬಾಗಿಲ ಬಳಿ ಒಬ್ಬರೇ ನಿಂತಿದ್ದರು. `ಇದೇನು ಭಾಳ ತ್ರಾಸಾಗ್ತದೇನು?’ ಎಂದು ಪುಟ್ಟ ಮಗುವಿನಂತೆ ಕೇಳಿದರು. ನಿವೃತ್ತರಾದ ಇಪ್ಪತ್ತು ವರ್ಷಗಳ ನಂತರವೂ ಅವರು  ಹೀಗೆ ಪುಟ್ಟ ಹುಡುಗನಂತೆ ಭಯಪಟ್ಟು ನಿಂತಿದ್ದನ್ನು ನೋಡಿ ನನಗೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಯಿತು. `ನಿಮಗೆ ಗಂಟಲಲ್ಲಿ ಅನ್ನ ಇಳಿಯುವವರೆಗೂ ಯೋಚಿಸಬೇಡಿ. ಆರಾಮಾಗಿರಿ. ಈ ರೋಗ ಇರೋದು ನಿಜ. ಆದರೆ ನೀವು ಹುಷಾರಾಗ್ತೀರಿ’ ಎಂದು ನಾನು ಸಮಾಧಾನ ಮಾಡಿದೆ. ಅದಾಗಿ ರೇಡಿಯೋಥೆರಪಿ. ಆಗ ಮನೆಗೆ ಬಂದು ಗಂಟೆಗಟ್ಟಳೆ ಆರಾಮುಕುರ್ಚಿಗೆ ಒರಗಿಯೇ ಕೂತಿದ್ದನ್ನು ನೀವು ತಿಂಗಳುಗಟ್ಟಳೆ ನೋಡಬಹುದಿತ್ತು.

ಇಂಥ ಮುಗ್ಧ ಜೀವಿಯ ಹಲವು ಮೂಲ ದಾಖಲೆ ಪತ್ರಗಳನ್ನು, ಆಸ್ಪತ್ರೆಯ ಬಿಲ್ಲುಗಳನ್ನು ಪಡೆದುಕೊಂಡು ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ ಎಂದು ನಂಬಿಸಿ ವಂಚಿಸಿದ ಜನಪ್ರತಿನಿಧಿಯೊಬ್ಬನನ್ನು ನಾನಿಲ್ಲಿ ಶಾಪ ಹಾಕಿಯಾದರೂ ನೆನಪಿಸಿಕೊಳ್ಳಬೇಕಿದೆ. ಗೋವಿಂದರಾಯರಂಥ  ಮುಗ್ಧ  ಜೀವಕ್ಕೆ ದ್ರೋಹ ಬಗೆಯುವ ಮನಸ್ಸು ಆತನಿಗೆ ಹೇಗೆ ಬಂತು ಎಂದು ನೀವೇ ಪ್ರಶ್ನಿಸಬೇಕಷ್ಟೆ.ಈ ಜನಪ್ರತಿನಿಧಿ ತನಗೆ ಪರಿಚಿತ ಎಂಬ ಹಿನ್ನೆಲೆಯಲ್ಲಿ ಗೋವಿಂದರಾಯರು ಈ ಯತ್ನ ನಡೆಸಿದ್ದರು. ಹಣ ಬರುವುದಿರಲಿ, ರಸೀದಿಗಳೂ ಕಣ್ಮರೆಯಾದವು.

ತಮ್ಮ ಬದುಕಿನಲ್ಲಿ ಎಂಥ ವಿಶೇಷಗಳನ್ನೂ ನಿರೀಕ್ಷಿಸದೆ, ಅತ್ಯಂತ ಸಹಜವಾಗಿ, ಎಲ್ಲರೊಳಗೊಂದಾಗಿದ್ದ ಗೋವಿಂದರಾಯರು … ನನ್ನ ಪಿತೃ ಸಮಾನರು. ಮಹಾನ್‌ ಘಟನೆಗಳು ಇಲ್ಲದೆಯೇ ಬದುಕಿಹೋದ  ಕೋಟ್ಯಂತರ ಸರಳಜೀವಿಗಳಲ್ಲಿ ಅವರೂ ಒಬ್ಬರು. ಅದಕ್ಕೇ ಅವರು ನನಗೆ ಅತ್ಯಂತ ಪ್ರಿಯರಾಗಿದ್ದಾರೆ. ತಂದೆಯಾಗಿ, ಮಾವನಾಗಿ, ಅಜ್ಜನಾಗಿ ತಮ್ಮ ಹೊಣೆಗಾರಿಕೆಗಳನ್ನು ಯಾರ ಹಂಗೂ ಇಲ್ಲದೆ ಪೂರೈಸಿದ ಅವರು ಇದ್ದರೆಂದೇ ನಿಮ್ಮಲ್ಲಿ ಹಲವರಿಗೆ ಗೊತ್ತಿರಲಿಲ್ಲ ತಾನೆ?

ನೇಮ್‌, ಫೇಮ್‌ ಮತ್ತು ಹಣದ ಆಸೆಗೆ ಬಿದ್ದ ನಾವೆಲ್ಲಿ? ಬದುಕು ಜಟಕಾ ಬಂಡಿ ಎಂದು ವಿಧಿ ಹೇಳಿದಂತೆ ವಿಧೇಯವಾಗಿ ನಡೆದುಕೊಂಡು  ವಿದಾಯ ಹೇಳಿದ ಗೋವಿಂದರಾಯರಂಥ ಅಸಂಖ್ಯ ಜೀವಗಳೆಲ್ಲಿ? – ಇದೇ ಅವರನ್ನು ನೆನಪಿಸಿಕೊಂಡಾಗಲೆಲ್ಲ ನನಗೆ ಅನ್ನಿಸುವ ಭಾವ. ನಿಮ್ಮ ಮನೆಯಲ್ಲೂ ಇಂಥ ಸಜ್ಜನ ವ್ಯಕ್ತಿತ್ವ ಇರಬಹುದು. ಅವರೆಲ್ಲರಿಗೂ ಈ ಪುಟ್ಟ ಬ್ಲಾಗ್‌ ಮೂಲಕ ವಂದಿಸುತ್ತೇನೆ.  ಅನಾನಿಮಸ್‌ ಆಗಿ ಬದುಕಬೇಕೆಂದು  ಘೋಷಿಸುವುದು ಸುಲಭ. ಆದರೆ ದಶಕಗಳ ಕಾಲ ಹಾಗೆ ಬದುಕಿ ತೋರಿಸುವುದು ಬಹು ದೊಡ್ಡ ಸವಾಲು.

ಗೋವಿಂದರಾಯರಿಗೆ, ಅವರಂಥ ಎಲ್ಲರಿಗೂ ನನ್ನ ಗೌರವಪೂರ್ವಕ ನಮನಗಳು.

One thought on “ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ

  1. ಅವರ ಒಂದು ಪುಟ್ಟ ಭಾವಚಿತ್ರವನ್ನು ಲೇಖನದ ಜೋಡಿ ಸೇರಿಸಿದ್ರೆ ಛಲೋ ಆಗ್ತಿತ್ತಲ್ವೇ?

Leave a Reply

Your email address will not be published. Required fields are marked *

20 − 9 =

This site uses Akismet to reduce spam. Learn how your comment data is processed.