ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ

ಇಂಟರ್‌ನೆಟ್‌.ORG ಎಂದರೆ ನಿಮಗೆ ಏನನ್ಸುತ್ತೆ? ನನಗೆ ಇಂಟರ್‌ನೆಟ್‌ ಕುರಿತ ಒಂದು ವಿಶ್ವವ್ಯಾಪಿ ಸಾಮಾಜಿಕ ಸಂಘಟನೆ ಅನ್ಸುತ್ತೆ. ಅದು ತಪ್ಪು. ಈ ಜಾಲತಾಣವೀಗ ಫೇಸ್‌ಬುಕ್‌ನ ಆಸ್ತಿ. ೧೯೯೩ರಿಂದ (ಆಗ ಮಾರ್ಕ್‌ ಝುಕರ್‌ಬರ್ಗ್‌ ವಯಸ್ಸು ೯) ಮೈಕೇಲ್‌ ಬಾಯರ್‌ ಎಂಬಾತನ ಬಳಿ ಇದ್ದ ಈ ಡೊಮೈನ್‌ನ್ನು ಮಾರ್ಕ್‌ ಝುಕರ್‌ಬರ್ಗ್‌ ಇತ್ತೀಚೆಗೆ ದಲ್ಲಾಳಿಯೊಬ್ಬನ ಮೂಲಕ ಖರೀದಿಸಿದ್ದಾರೆ. ನಿನ್ನೆಯಷ್ಟೇ (೧೦ ಫೆಬ್ರುವರಿ ೨೦೧೫) ಈ ಜಾಲತಾಣವನ್ನು ಭಾರತದಲ್ಲಿ ಅನಾವರಣಗೊಳಿಸಲಾಗಿದೆ!

ಅರೆ, ಜಾಲತಾಣ ಎಂದಮೇಲೆ ಭೌಗೋಳಿಕವಾಗಿ ಅನಾವರಣ ಮಾಡುವುದೇನು ಬಂತು? ಎಲ್ಲಾ ಕಡೆಯೂ ಇದು ಸಿಗಬೇಕಲ್ಲವೆ ಎಂದು ನೀವು ಪ್ರಶ್ನಿಸಿದರೆ, ನಿಮ್ಮನ್ನು ಹೊಸ ಮೂರ್ಖರೆಂದು ವಿಷಾದದಿಂದ ಹೇಳಬೇಕಾಗುತ್ತದೆ. ಈ ಡೊಮೈನ್‌ ಇದೀಗ ಫೇಸ್‌ಬುಕ್‌ನ ನೇರ ಆಸ್ತಿ. ಇದರೊಂದಿಗೆ ಗೂಗಲ್‌, ಸ್ಯಾಮ್‌ಸಂಗ್, ನೋಕಿಯಾ, ಕ್ವಾಲ್‌ಕಾಮ್‌ ಸೇರಿದಂತೆ ಹಲವು ಕಂಪೆನಿಗಳು ಸೇರಿಕೊಂಡು ಇಡೀ ವಿಶ್ವದಲ್ಲಿ ಇಂಟರ್‌ನೆಟ್‌ ಉಳ್ಳವರು – ಉಳ್ಳದವರ ನಡುವಿನ ಕಂದರವನ್ನು ತುಂಬಲು ಹೊರಟಿವೆಯಂತೆ! ಭಾರತದಲ್ಲಿ ರಿಲಯನ್ಸ್‌ ಕಮ್ಯುನಿಕೇಶನ್‌ ಮೂಲಕ ಮಾತ್ರವೇ ಈ ಜಾಲತಾಣವನ್ನು ನೀವು ಕಾಣಬಹುದು. ಹಾಗಂತ ಈ ಪುಟಕ್ಕೆ ಭೇಟಿ ಕೊಟ್ಟಾಗ ಸಿಗುವ ಸಂದೇಶ.

facebook-growth-in-Asia-India-2014 Facebook-revenue-per-user-Asia-world

Internet org map

 ಇಂಥ ವಿಶ್ವಸ್ತರದ ಸಮಾಜಸೇವೆಯನ್ನು ಯಾರಾದರೂ ಕೊಡಲಿ, ಒಳ್ಳೆಯದೇ ಅಲ್ಲವೆ ಎಂದು ನೀವು ಕೇಳಿದರೆ, ಮತ್ತೊಮ್ಮೆ ನಿಮ್ಮ ಮೂರ್ಖತನವನ್ನು ವಿಷಾದದಿಂದ ಒಪ್ಪಿಕೊಳ್ಳಬೇಕಾಗುತ್ತದೆ. ಭಾರತ ಮತ್ತು ಏಷ್ಯಾ ಖಂಡ – ಇವುಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ೧೦೦ ಕೋಟಿ ಜನ ಪ್ರತಿನಿತ್ಯವೂ ಫೇಸ್‌ಬುಕ್‌ ನೋಡುವಂತೆ ಮಾಡುವುದೇ ಇದರ ಹಿಂದಿನ ರಹಸ್ಯ ಉದ್ದೇಶ ಎಂದು ಹಲವು ಮುಕ್ತ ಇಂಟರ್‌ನೆಟ್‌ ಚಳವಳಿಕಾರರು ಹೇಳುತ್ತಾರೆ. ಇತರೆ ದೈತ್ಯ ಸಂಸ್ಥೆಗಳ ಉದ್ದೇಶವೂ ಇದಕ್ಕಿಂತ ಭಿನ್ನವಾಗಿಲ್ಲ.

ದ್ರೋನ್‌ಗಳು, ಉಪಗ್ರಹಗಳು, ಇತರೆ ಅಂತರಜಾಲ ಸೇವೆಯ ಜಾಲಗಳು, ಫ್ರೀ ಸ್ಪೇಸ್‌ ಆಪ್ಟಿಕ್ಸ್‌ ಹೀಗೆ ಹತ್ತು ಹಲವು ಸೇವೆಗಳನ್ನು ಸಂಶೋಧಿಸಿ ಈ ಯೋಜನೆಯಲ್ಲಿ ಅಳವಡಿಸುವುದಾಗಿ ಝುಕರ್‌ಬರ್ಗ್‌ ತನ್ನ ಮಹಾಪ್ರಬಂಧದಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ನಾಸಾದ ಜೆಟ್‌ ಪ್ರೊಪಲ್ಶನ್‌ ಲ್ಯಾಬ್‌, ಅಮೆಸ್‌ ರಿಸರ್ಚ್‌ ಸೆಂಟರ್‌ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳ ತಜ್ಞರನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಇಡೀ ಜಗತ್ತನ್ನು, ವಿಶೇಷವಾಗಿ ಏಷ್ಯಾ, ಆಫ್ರಿಕಾ ಖಂಡಗಳ ದೇಶಗಳನ್ನು ಇಂಟರ್‌ನೆಟ್‌ ಸೇವೆಯ ವ್ಯಾಪ್ತಿಯಲ್ಲಿ ತರುವುದು ಅವರ ಉದ್ದೇಶ.

ಇಲ್ಲಿ ತಪ್ಪೇನಿದೆ? ಇಂಟರ್‌ನೆಟ್‌ ಸೇವೆ ಉಚಿತವಾಗಿ ದೊರಕುವುದಾದರೆ ಒಳ್ಳೆಯದೇ ಅಲ್ಲವೆ? ನಾವೀಗ ಫೇಸ್‌ಬುಕ್‌ನ್ನು ಉಚಿತವಾಗಿ ಬಳಸುತ್ತಿಲ್ಲವೆ? ಗೂಗಲ್‌ನ್ನು ಉಚಿತವಾಗಿ ಬಳಸುತ್ತಿಲ್ಲವೆ? ಈಗ ಯಾಕೆ ನಿಮ್ಮ ದೂರು ಎಂದು ನೀವು ಪ್ರಶ್ನಿಸಿದರೆ…..

ಮತ್ತೊಮ್ಮೆ ವಿಷಾದ ವ್ಯಕ್ತಪಡಿಸುತ್ತೇನೆ.

ಇಂಟರ್‌ನೆಟ್‌.ORG ಎಂದರೆ ಸಮಾಜ ಸೇವೆ ಅಲ್ಲ ಎಂಬುದನ್ನು ನೆನಪಿನಲ್ಲಿಡಿ. ಇಲ್ಲಿ ಆಯಾ ದೇಶಗಳ ನಿರ್ದಿಷ್ಟ ಮೊಬೈಲ್‌, ವೈಫೈ, ಉಪಗ್ರಹ, ಇತ್ಯಾದಿ ಮಾಧ್ಯಮಗಳ ಮೂಲಕ ನಿರ್ದಿಷ್ಟ ಕಂಪೆನಿಯ ಗ್ರಾಹಕರಿಗೆ ನಿರ್ದಿಷ್ಟ ಸಂಖ್ಯೆಯ ವೆಬ್‌ಸೈಟ್‌ಗಳು ಉಚಿತವಾಗಿ ದೊರೆಯುತ್ತವೆ. ಇನ್ನಷ್ಟು ವಿವರಿಸಬೇಕೆಂದರೆ: ರಿಲಯನ್ಸ್‌ ಮೊಬೈಲ್‌ ಮೂಲಕ ನೀವು ಫೇಸ್‌ಬುಕ್‌, ಗೂಗಲ್‌, ಹೀಗೆ ಹಲವು ವೆಬ್‌ಸೈಟ್‌ಗಳನ್ನು ಉಚಿತವಾಗಿ / ಕನಿಷ್ಠ ದರದ ಶುಲ್ಕ ನೀಡಿ ಬಳಸಬಹುದು. ಇಲ್ಲಿ ಕ್ಯಾಚ್‌ ಇರುವುದೇ ಹೀಗೆ: ಇಂಟರ್‌ನೆಟ್‌ನ್ನು ಜಗತ್ತಿನ ಎಲ್ಲ ಕಡೆಯೂ ಸಿಗುವಂತೆ ಮಾಡಲಾಗುತ್ತದೆ. ಆದರೆ ಅದನ್ನು ಪಡೆಯಬೇಕೆಂದರೆ ನೀವು ಖಾಸಗಿ ಸಂಸ್ಥೆಯ ಗ್ರಾಹಕರಾಗಬೇಕು. ಇದು ನನ್ನ ಅಲ್ಪ ತಿಳಿವಳಿಕೆ. ತಪ್ಪಿದ್ದರೆ ತಿಳಿಸಿ.

ಈ ರೀತಿಯಾಗಿ ನಿರ್ದಿಷ್ಟ ಖಾಸಗಿ ಸಂಸ್ಥೆಗಳ ಮೂಲಕ ಹರಿದು ಬರುವ ಇಂಟರ್‌ನೆಟ್‌ನಲ್ಲಿ ಅಲಿಪ್ತತೆ ಇರುವುದಿಲ್ಲ ಎಂಬ ಆತಂಕವನ್ನು ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸುತ್ತಾರೆ. ಏಕೆಂದರೆ ವಾಣಿಜ್ಯ ಉದ್ದೇಶದ ವೆಬ್‌ಸೈಟ್‌ಗಳು ಮಾತ್ರವೇ ಹೆಚ್ಚಾಗಿ ಕಾಣಸಿಗಬಹುದು; ಅಥವಾ ಅತಿವೇಗವಾಗಿ ಪರದೆಯ ಮೇಲೆ ಮೂಡಬಹುದು. ನಿಮಗೆ ವಿಕಿಪೀಡಿಯಾದಂಥ ಮುಕ್ತ ಮಾಹಿತಿ ಕೋಶಗಳ ಪುಟಗಳು ತೆರೆದುಕೊಳ್ಳಬಹುದು. ಆದರೆ ಅವುಗಳಲ್ಲಿ ಇರುವ ನೂರಾರು ಉಲ್ಲೇಖಗಳ ಹೈಪರ್‌ಲಿಂಕ್‌ಗಳೂ ತೆರೆದುಕೊಳ್ಳುತ್ತವೆಯೇ? ನನಗೆ ಗೊತ್ತಿಲ್ಲ. ಹೀಗೆ ನಿಯಂತ್ರಿತ ಹರಿವಿನ ಇಂಟರ್‌ನೆಟ್‌ ಎಂಬುದು ಮುಕ್ತ ಮಾಹಿತಿಗೆ ಸಂಪೂರ್ಣ ವಿರೋಧಿ ನಡೆ.

ಫೇಸ್‌ಬುಕ್‌ನ ಇನ್ನೊಬ್ಬ ಅಧಿಕಾರಿ ಶೆರಿಲ್‌ ಸ್ಯಾಂಡ್‌ಬರ್ಗ್‌ ಕೂಡಾ ಈ ಹಿಂದೆ ಭಾರತಕ್ಕೆ ಬಂದು ಫೇಸ್‌ಬುಕ್‌ನ್ನು ಹೇಗೆ ಇ-ಆಡಳಿತಕ್ಕೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ `ಮನವರಿಕೆ’ ಮಾಡಿಕೊಟ್ಟು ಹೋಗಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮವೂ ಸುಧಾರಿಸುತ್ತದಂತೆ. ಇದೇ ಝುಕರ್‌ಬರ್ಗ್‌ ೨೦೧೦ ಮತ್ತು ೨೦೧೧ರಲ್ಲಿ ಚೀನಾಗೆ ಭೇಟಿ ಕೊಟ್ಟು ಇಂಥದ್ದೇ ಪ್ರಯತ್ನ ಮಾಡಿ ಸೋತಿದ್ದರು ಎಂದು ವರದಿಗಳು ತಿಳಿಸುತ್ತವೆ. ಏಕೆಂದರೆ ಚೀನಾದಲ್ಲಿ ರೆನ್‌ರೆನ್‌, ಕಾಯ್‌ಜಿನ್‌೦೦೧, ೫೧ಡಾಟ್‌ಕಾಮ್‌ನಂಥ ಸಮಾಜತಾಣಗಳು ಸಾಕಷ್ಟು ಬೆಳೆದಿವೆಯಂತೆ. ಆದ್ದರಿಂದ ಚೀನಾದಲ್ಲಿ ಆಗಲಾರದ ಕೆಲಸವನ್ನು ಪ್ರಜಾತಾಂತ್ರಿಕ, ಅಭಿವ್ಯಕ್ತಿ ಸ್ವಾತಂತ್ರ್‍ಯದ ದೇಶವಾದ ಭಾರತದಲ್ಲಿ ಮಾಡಬಹುದು ಎಂದು ಲೆಕ್ಕ ಹಾಕಿಯೇ ಝುಕರ್‌ಬರ್ಗ್‌ ಭಾರತಕ್ಕೆ ಬಂದರು.

ಮೊಬೈಲ್‌ ಬಳಕೆಯ ಮೂಲಕವೇ ಫೇಸ್‌ಬುಕ್‌ನ ಶೇ. ೬೨ರಷ್ಟು ಆದಾಯವು ಬಂದಿದೆ ಎಂಬ ಸುದ್ದಿಯನ್ನೂ, ಭಾರತದಲ್ಲಿ ಆಂಡ್ರಾಯ್ಡ್‌ ಫೋನ್‌ಗಳನ್ನು ಹೆಚ್ಚು ಮಾರುವುದಕ್ಕಾಗಿ ಪ್ರಚಾರ ಮಾಡಲು ೧೦೦ ಕೋಟಿ ರೂ.ಗಳನ್ನು ಗೂಗಲ್‌ ಸಂಸ್ಥೆಯು ಯೋಜಿಸಿರುವುದನ್ನೂ ಗಮನಿಸಿದರೆ, ಈ ಮಾರುಕಟ್ಟೆ ತಂತ್ರದ ಅರಿವಾದೀತು.

ಈಗ ಫೇಸ್‌ಬುಕ್‌ ಮತ್ತು ಗೂಗಲ್‌ ಬಳಕೆ ತಪ್ಪೇ? ನೀವೂ ಅದನ್ನೇ ಬಳಸುತ್ತಿಲ್ಲವೆ ಎಂಬ ಪ್ರಶ್ನೆಯನ್ನು ನೋಡೋಣ: ನಿಜ. ಇವೆರಡೂ ಖಾಸಗಿ ಸಂಸ್ಥೆಗಳು. ಇವುಗಳು ಇಲ್ಲದೆಯೂ ನಾವು ಆನ್‌ಲೈನ್‌ ಸಂವಹನ ಸಾಧಿಸಬಹುದು. ಆದರೆ ಈ ಎರಡೂ ಸಂಸ್ಥೆಗಳ ಉತ್ಪನ್ನಗಳನ್ನು ಕೋಟ್ಯಂತರ ಜನ ಬಳಸುತ್ತಿರುವುದರಿಂದ ಅದನ್ನು ನಾವೂ ಬಳಸುವ ಅನಿವಾರ್ಯತೆ ಬಂದುಬಿಟ್ಟಿದೆ. ಇದರಿಂದ ಹೊರಬರಬೇಕಾಗಿರುವುದು ಒಂದಲ್ಲ ಒಂದು ದಿನ ಅನಿವಾರ್ಯ. ಹೊರಬರದಿದ್ದರೂ, ಅವುಗಳ ದಾಸರಾಗಿ ಇರಬೇಕಿಲ್ಲ. ಹೇಗೆ? ನಿಮ್ಮ ನಿತ್ಯದ ಚಟುವಟಿಕೆಗಳಲ್ಲಿ ಫೇಸ್‌ಬುಕ್‌ ಮತ್ತು ಗೂಗಲ್‌ ಚಟುವಟಿಕೆಗಳನ್ನು ಸೀಮಿತಗೊಳಿಸಿ, ಅಷ್ಟೆ!

ನಮ್ಮೆಲ್ಲರ ದೂರವಾಣಿ ಸಂಖ್ಯೆಗಳಿಂದ ಹಿಡಿದು ನಾವು ಯಾವ ಬಡಾವಣೆಯ ಯಾವ ಮೂಲೆಯಲ್ಲಿ ಉಚ್ಚೆ ಹೊಯ್ದೆವು ಎಂಬುದನ್ನೂ ಅಕ್ಷಾಂಶ ರೇಖಾಂಶಗಳಿಂದ ಗುರುತಿಸಿ ದಾಖಲಿಸುವ ಮೊಬೈಲ್‌ಗಳು, ತಂತ್ರಾಂಶಗಳು ಬಂದು ಹಲವು ವರ್ಷಗಳಾದವು. ಬಹುಶಃ ಈಗ ನಿಮ್ಮ ತಲೆಯಲ್ಲಿ ಯಾವ್ಯಾವ ಚಿಂತನೆಗಳಿವೆ ಎಂಬುದನ್ನು ಬಿಟ್ಟು ಉಳಿದಿದ್ದೆಲ್ಲ ಡಾಟಾಬೇಸ್‌ನಲ್ಲಿ ಭದ್ರವಾಗಿವೆ!

ನಾನು ಕೆಲವು ವರ್ಷಗಳ ಹಿಂದೆಯೇ ಬ್ಲಾಗಿಗರ ಸಭೆಯಲ್ಲಿ ಹೇಳಿದ್ದೆ: ಬ್ಲಾಗ್‌ ಕೂಡಾ ಖಾಸಗಿ ಕಂಪೆನಿಯ ಕೊಡುಗೆ. ಆದ್ದರಿಂದ ಸ್ವಂತ ಡೊಮೈನ್‌ ಇಟ್ಟುಕೊಳ್ಳಿ ಎಂದು. ಬ್ರೆಝಿಲ್‌ನಂಥ ದೇಶಗಳು ತಮ್ಮದೇ ಅಂತರಜಾಲ ದ್ವೀಪವನ್ನು ಹೊಂದಲು ಮುಂದಾಗಿವೆ. ಖಾಸಗಿತನವನ್ನು ಕದಿಯುವ ಸಂಚುಗಳಿಂದ ಹೊರಬರಲು ಹಲವು ದೇಶಗಳು ಯೋಚಿಸುತ್ತಿವೆ. ಆಫ್ರಿಕಾ, ಬ್ರೆಝಿಲ್‌ ದೇಶಗಳಿಗೆ ಕಡಿಮೆ ದರದ ಇಂಟರ್‌ನೆಟ್‌ ನೀಡಲು ಇನ್ನೊಂದು ಉಪಗ್ರಹ ಮುಂದಾಗಿದೆ. 

ಮೊದಲು ಗುಲಾಮೀತನವಿತ್ತು; ಆಮೇಲೆ ಬ್ರಿಟಿಶರ ಈಸ್ಟ್‌ ಇಂಡಿಯಾ ಕಂಪೆನಿ. ಅದಾದ ಮೇಲೆ ಭಾರತವು ಪ್ರಜಾತಾಂತ್ರಿಕ ದೇಶವಾಯ್ತು. ನೆಹರೂ ಆಗ ರಷ್ಯಾದಿಂದ ಪಂಚವಾರ್ಷಿಕ ಯೋಜನೆಯನ್ನು ಕಡ ತಂದರು. ಅದು ಕೀಟನಾಶಕಗಳ ಮಹಾನ್‌ ದುರಂತವಾಗಿ ಪರಿಣಮಿಸಿ ಈಗ ಆಕಾಶವಾಣಿಯಲ್ಲಿ ಸಾವಯವ ಕೃಷಿ ಸಲಹೆಗಳು ಮೂಡಿಬರುತ್ತಿವೆ. ಅದೇ ವೇಳೆ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತಕ್ಕೆ ಬರುವುದು ಕಡಿಮೆಯಾಗಿ ಭಾರತವೇ ಬಹುರಾಷ್ಟ್ರೀಯ ಕಂಪೆನಿಗಳನ್ನು ಜಗತ್ತಿಗೆ ರಫ್ತು ಮಾಡಿತು! ಈಗ, ಬಹು ಬಹು ರಾಷ್ಟ್ರೀಯ ಸಂಸ್ಥೆಗಳು ಆಕಾಶವನ್ನೆಲ್ಲ ಆವರಿಸಿ ಅಂತರಜಾಲವನ್ನು ಕಾಡು ಮೇಡೆನ್ನದೆ, ಬೆಟ್ಟ ಬಯಲು ಎನ್ನದೆ, ನದಿ, ಕೊಳ್ಳ ಎನ್ನದೆ, ಹಳ್ಳಿ, ನಗರ ಎನ್ನದೆ ಎಲ್ಲೆಡೆಯೂ ವ್ಯಾಪಿಸುತ್ತೇವೆ ಎಂದು ಬಂದಿವೆ.

ಅವುಗಳನ್ನು ನೀವು ಸ್ವಾಗತಿಸಿ, ಬಿಡಿ, ಬರುವುದು ಖಚಿತ! ನಾನು- ನೀವು ಯಃಕಶ್ಚಿತ್‌ ಮೂರ್ಖರು ಎಂದು ಸಾಬೀತಾದ ಮೇಲೆ ತಡೆಯುವವರಾರು?

ಹಾಗಾದರೆ ಸರ್ಕಾರ ಮತ್ತು ಸಾರ್ವಜನಿಕರು ಈ ಕುರಿತು ಕೈಗೊಳ್ಳಬಹುದಾದ ಕ್ರಮಗಳೇನು?  (ಇದು ಕೇವಲ ನನ್ನ ಆರಂಭಿಕ ಸಲಹೆಗಳು)

  1. ಸರ್ಕಾರವು ಸ್ವತಂತ್ರವಾದ ಹೂಡಿಕೆಯ ಮೂಲಕ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಸಾರ್ವತ್ರೀಕರಿಸಬೇಕು.
  2. ಗ್ರಾಮಪಂಚಾಯತ್‌ಗಳಿಗೆ ಮತ್ತು ಪ್ರಾಥಮಿಕ ಶಾಲೆಗಳು, ಹೈಸ್ಕೂಲುಗಳು, ಕಾಲೇಜುಗಳಿಗೆ, ರೈತ ಕೇಂದ್ರಗಳೇ ಮುಂತಾದ ಸಾರ್ವಜನಿಕ ಸೇವೆಯ ಸ್ಥಳಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಉಚಿತವಾಗಿ ನೀಡುವುದು.
  3. ಸರ್ಕಾರವೇ ಫೇಸ್‌ಬುಕ್‌ ಮಾದರಿಯಲ್ಲಿ  ಉಪಗ್ರಹಗಳನ್ನು, ದ್ರೋನ್‌ಗಳನ್ನು ಹಾರಿಬಿಡುವುದು; ಉದಾಹರಣೆಗೆ ಸಾರ್ಕ್‌ ದೇಶಗಳು ಸೇರಿ ಈ ಕ್ರಮ ಕೈಗೊಳ್ಳಬಹುದು.
  4. ಕಣಜದಂಥ ಮಾಹಿತಿ ಕೋಶಗಳನ್ನು ಸರ್ಕಾರವೇ ಸ್ಥಾಪಿಸಿ ಅವುಗಳನ್ನು ಸರ್ವವ್ಯಾಪಿಯಾಗಿಸಬೇಕು.
  5. ಫೇಸ್‌ಬುಕ್‌ನಂಥದ್ದೇ ಸಮಾಜತಾಣವನ್ನು ಸರ್ಕಾರವೇ ರೂಪಿಸಿ ಅದರ ಮೂಲಕ ಸರ್ಕಾರಿ ಆಡಳಿತವನ್ನು ಚುರುಕುಗೊಳಿಸಬೇಕು.
  6. ಸಮಾಜವಿರೋಧಿ ತಾಣಗಳ ಪಟ್ಟಿಯನ್ನು ರೂಪಿಸಿ,  ಅವುಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ಬಂಧಿಸಬೇಕು. ಆರೋಗ್ಯಕರ ವ್ಯಕ್ತಿತ್ವ ವಿಕಸನದ ತಾಣಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್‍ಯ ಎಂದರೆ ಎಲ್ಲರೂ ಏನು ಬೇಕಾದರೂ ಹೇಳುವಂಥದ್ದಲ್ಲ ಎಂದು ಗಟ್ಟಿಯಾಗಿ ಹೇಳಬೇಕು.  ಭಾರತದ ಸಂವಿಧಾನ ಮತ್ತು ಅದರ ಆಶಯಗಳನ್ನು ಉತ್ತೇಜಿಸುವ ಅಭಿವ್ಯಕ್ತಿ ಇರಲಿ; ಆರೋಗ್ಯಕರ ಚರ್ಚೆ ಇರಲಿ.

Leave a Reply

Your email address will not be published. Required fields are marked *

16 + 19 =

This site uses Akismet to reduce spam. Learn how your comment data is processed.