`ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?

ಯಾವ್ಯಾವುದೋ ಹಳೆಯ ಕಡತಗಳನ್ನೆಲ್ಲ ತೆರೆತೆರೆದು ನೋಡುತ್ತಿದ್ದಾಗ ಜೀತ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ಮಾಡಲೆಂದು ಬಂದ ಅಮೆರಿಕಾದ ತಂಡದ ಛಾಯಾಗ್ರಾಹಕ ರಾಬಿನ್‌ ರೊಮಾನೋ ತೆಗೆದ ಚಿತ್ರಗಳು ಕಂಡವು. ನನ್ನ `ಜೀತ’  ಕಥೆಯು ಒಂಥರ ಈ ಸಾಕ್ಷ್ಯಚಿತ್ರದ ಸಾಕ್ಷ್ಯಕಥೆಯೇ ಆಗಿದೆ. ಅದರಲ್ಲಿ ಬರೋ ರಾಬಿನ್‌, ಈತ ಇಬ್ಬರೂ ಒಂದೇ. ಐದೂ ದಿನಗಳ ಕಾಲ ಛಾಯಾಗ್ರಹಣ, ವಿಡಿಯೋಗ್ರಫಿಯಲ್ಲಿ ಮುಳುಗಿ ಏನೊಂದೂ ಸುದ್ದಿ ಹೇಳದ ರಾಬಿನ್‌ ಆ ರಾತ್ರಿ ಚಾಮರಾಜನಗರದಿಂದ ಬೆಂಗಳೂರಿಗೆ ಮರಳುವಾಗ ಕತ್ತಲಿನಲ್ಲೇ ಎಷ್ಟೆಲ್ಲ ಮಾತನಾಡಿದ. ಕೊನೆಗೆ `ನನ್ನ ಅಮ್ಮನಿಗೆ ಹುಷಾರಿಲ್ಲ; ಅವಳು ಹುಚ್ಚು ಹಿಡಿದಂತೆ ಇರ್‍ತಾಳೆ. ಅದಕ್ಕೇ ನಾನು ಅರ್ಜೆಂಟಾಗಿ ಮರಳಬೇಕಿದೆ’ ಎಂದು ಒಂದೇ ವಾಕ್ಯ ಹೇಳಿ ನನ್ನನ್ನು ನಡುಗಿಸಿದ್ದ. ಸಾವಿರಾರು ಮೈಲಿಗಳ ದೂರದಲ್ಲಿ ಕೆಲಸ ಮುಗಿಸಿದ ಮೇಲೆ ಅವನಿಗೆ ಅಮ್ಮನದೇ ಚಿಂತೆ….

ನಾನು ಬರೆದ `ಜೀತ’ ಕಥೆಯ ಕೊನೆಯ ಭಾಗ ರಾಬಿನ್‌ದೇ:

*****

ರಾತ್ರಿಯೇ ಬೆಂಗಳೂರಿಗೆ ಹೊರಟ ಟೆಂಪೋದಲ್ಲಿ ನನ್ನ ಬದಿಯಲ್ಲೇ ಕೂತ ರಾಬಿನ್ ಮಾತಿಗೆ ಶುರು ಹಚ್ಚಿಕೊಂಡ. ಅವನು ಅಮೆರಿಕಾದ ಖ್ಯಾತ ಫೋಟೋಗ್ರಾಫರ್ ಮತ್ತು ಡಾಕ್ಯುಮೆಂಟರಿ ಪ್ರವೀಣ. ಮುಂದಿನ ತಿಂಗಳು ಸಾರಾ ಜೊತೆಗೆ ಆಫ್ರಿಕಾಗೆ ಹೋಗ್ತಿದಾನೆ.

ನಿನ್ನೆ ರಾತ್ರಿ ನು ಗಲಾಟೆ ಮಾಡ್ತಾ ಇದ್ದೆಯಲ್ಲ, ಯಾಕೆ, ನಿದ್ದೆ ಬರ್‍ಲಿಲ್ವ? ಎಂದು ಕೇಳಿದೆ.

ಇಲ್ಲ. ಅಮೆರಿಕಾದಲ್ಲಿ ನಾನು ನನ್ನಮ್ಮ ಇಬ್ರೇ ಇರೋದು. ಅವಳು ಸ್ವಲ್ಪ ಮೆಂಟಲ್.. ಅವಳು ನಿನ್ನೆ ರಾತ್ರಿ ತುಂಬಾ ಗಲಾಟೆ ಮಾಡಿದ್ಲಂತೆ. ಅದಕ್ಕೇ ನಾನು ಆಸ್ಪತ್ರೆ ಸಿಬ್ಬಂದಿಗೆ ಫೋನ್ ಮಾಡ್ತಾ ಇದ್ದೆ. ಈಗ ನಾನು ಕೂಡ್ಲೇ ವಾಪಸು ಹೋಗೋದಕ್ಕೂ ಆಗಲ್ವಲ್ಲ… ಸದ್ಯ ಶೂಟಿಂಗ್ ಒಂದಿನ ಮುಂಚೇನೇ ಮುಗೀತು ಎಂದ.

ಅಸ್ವಸ್ಥ ಅಮ್ಮನನ್ನು ಅಲ್ಲಿ ಬಿಟ್ಟು ಶೂಟಿಂಗ್‌ಗೆ ಯಾಕೆ ಬರಬೇಕಿತ್ತು ಎಂದು ಕೇಳಿದೆ.

ಅಮ್ಮಗೆ ಸೋಶಿಯಲ್ ಸೆಕ್ಯುರಿಟೀನೂ ಇದೆ. ನಾನೂ ಪ್ರೀತಿಯಿಂದ ನೋಡ್ಕೋತಾ ಇದೀನಿ. ಆದ್ರೆ ಬಾಂಡೆಡ್ ಲೇಬರ್ ವಿಷ್ಯ ಹಾಗಲ್ಲ. ಅವರ ಕಥೇನ ಎಲ್ರಿಗೂ ತಿಳಿಸ್ದೇ ಇದ್ರೆ ತಪ್ಪಾಗುತ್ತಲ್ವ? ರಾಬಿನ್ ಕೇಳಿದ. ತನ್ನ ಬ್ಲಾಕ್‌ಬೆರ್ರಿಯಿಂದಾನೇ ನನಗೊಂದು ಟೆಸ್ಟ್ ಮೈಲ್ ಕಳಿಸಿದ ರಾಬಿನ್ ಒಳ್ಳೇದು. ಈ ಮೈಲ್‌ನಲ್ಲಿ ಸಿಗೋಣ ಎಂದು ಕೈಚಾಚಿದ.

ಒಂದಷ್ಟು ಕಾಸಿಗಾಗಿ ಪರಿಚಯವೇ ಇಲ್ಲದವರ ಜತೆಗೆ ಬಂದ ನಾನು ರಾಬಿನ್ ಮುಖದಲ್ಲಿ ಎಂಥ ಭಾವ ಇರಬಹುದು ಎಂದು ಊಹಿಸುತ್ತ ಕಿಟಕಿಯಾಚೆ ನೋಡತೊಡಗಿದೆ.

*****

ಇವತ್ತು ಅವನ ಭಾಷಣಗಳ ಫೋಲ್ಡರ್‌ ನೋಡುತ್ತ ಎಲ್ಲಿದ್ದಾನೆ ಎಂದು ಹುಡುಕಿದರೆ, ಇನ್ನೆಲ್ಲಿ? ೨೦೧೩ರ ನವೆಂಬರ್‌ ೧ರಂದು ಯಾವುದೋ ಕೀಟ ಹಬ್ಬಿಸಿದ ರೋಗದಿಂದ ತೀರಿಕೊಂಡರು ಎಂದು ಒಂದು ವರದಿ ಹೇಳಿದರೆ, ಆತ್ಮಹತ್ಯೆ ಮಾಡಿಕೊಂಡ ಎಂದು ಆತನ ಪ್ರೇಯಸಿಯೇ ಬರೆದ ಬ್ಲಾಗ್‌ ಸಿಕ್ಕಿದೆ. ಆಕೆಯೂ ಅವನ ಅಮ್ಮನ ಬಗ್ಗೆ ಬರೆದಿದ್ದಾಳೆ.  ತೀರಿಕೊಂಡಾಗ ರಾಬಿನ್‌ಗೆ ೫೭ರ ಹರೆಯ.

1397278_621919917871283_1331591684_o

`ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂಬ ಚೀಟಿಯನ್ನೂ, ತನ್ನ ನಿಶ್ಚಿತಾರ್ಥದ ಉಂಗುರವನ್ನೂ ರಾಬಿನ್‌ ಕವರಿನಲ್ಲಿ ಇಟ್ಟು ತನ್ನನ್ನೇ ತಾನು ಸಾಯಿಸಿಕೊಂಡನಂತೆ. ರಾಬಿನ್‌ ಬಗ್ಗೆ ಆಕೆ ಬರೆದ `ಧೂಮಕೇತು’ ಎಂಬ ಬ್ಲಾಗ್‌ ಓದಿ. ಎದೆ ಬಿರಿಯುತ್ತದೆ. 

ಬಾಲಕಾರ್ಮಿಕರು, ಜೀತದಾಳುಗಳು ಎಂದರೆ ತುಂಬಾ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದ ರಾಬಿನ್‌ ತನ್ನ ಕೆಲಸಕ್ಕೆ ನಿಂತಾಗ ದೆವ್ವ ಬಡಿದಂತೆ ಓಡಾಡುತ್ತಿದ್ದುದನ್ನು ನೋಡಿದ ನನಗೆ ರಾಬಿನ್‌ ಇನ್ನಿಲ್ಲ ಎಂದು ನಂಬುವುದು ಕಷ್ಟವಾಗುತ್ತಿದೆ. ಅಮೆರಿಕಾದ ಪ್ರಮುಖ ಸಿನೆಮ್ಯಾಟೋಗ್ರಾಫರ್‌ ಆಗಿ ಹೆಸರುವಾಸಿಯಾಗಿದ್ದ ರಾಬಿನ್‌ನ `ದ ಹಾರ್ವೆಸ್ಟ್‌’ ಎಂಬ ಸಾಕ್ಷ್ಯಚಿತ್ರವು ತುಂಬಾ ಪ್ರಸಿದ್ಧ. ಬಾಲಕಾರ್ಮಿಕರ ಕಥೆಗಳನ್ನು ಆತ ಹೆಣೆದಿದ್ದಾನೆ.

ಈ ವಿಡಿಯೋ ನೋಡಿ

MV5BMTkwNjcwODQyOF5BMl5BanBnXkFtZTcwMjMyOTExNg@@._V1__SX1857_SY903_

ಚಾಕೋಲೆಟ್‌ ಉದ್ಯಮದಲ್ಲಿ ಮಕ್ಕಳ ಶೋಷಣೆಯಿಂದ ಹಿಡಿದು ಜಗತ್ತಿನ ಎಲ್ಲ ಮಕ್ಕಳ ಬಗ್ಗೆ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ರಾಬಿನ್‌ ಈಗ ಕೇವಲ ನೆನಪು. ಅವನೊಂದಿಗೆ ನಡೆಸಿದ ಚುಟುಕು ಈಮೈಲ್‌ ಸಂವಾದಗಳನ್ನು ನೋಡುವುದಷ್ಟೆ  ಈಗ ಸಾಧ್ಯ.

ನನ್ನ ನಿರುದ್ಯೋಗ ಪರ್ವದ ಒಂದು ಪ್ರಮುಖ ಅಸೈನ್‌ಮೆಂಟ್‌ ಆಗಿದ್ದ ಈ ಅನುಭವದ ಒಂದು ಪ್ರಮುಖ ಕೊಂಡಿ ಕಳಚಿದೆ.

ಭಾರತ ಬಿಡಿ, ಅಮೆರಿಕಾದಲ್ಲೂ ಬಾಲಕಾರ್ಮಿಕತೆ ಇದೆ ಎಂಬುದನ್ನು  ಸಾಕ್ಷಿಸಮೇತ ತೋರಿಸುವ ಛಾತಿ ರಾಬಿನ್‌ದು. ಅವನ ಟೆಡ್‌ ಟಾಕ್‌ ನೋಡಿ:

ರಾಬಿನ್‌, ನಿನ್ನನ್ನು ಕಳೆದುಕೊಂಡಿದ್ದು ತಡವಾಗಿ ಗೊತ್ತಾಯ್ತು. ನಿನ್ನ ನೆನಪು ನನಗೆ ಯಾವಾಗ್ಲೂ ಇರ್‍ತದೆ ಹ್ಞಾ….  ಐದು ದಿನ ಮಾತ್ರ ಜೊತೆಗಿದ್ದೆವು ನಿಜ; ಆದ್ರೆ ನೀನು ನನ್ನ ಮೇಲೆ ಬೀರಿದ ಪರಿಣಾಮ ಐವತ್ತು ವರ್ಷ ಮೀರುತ್ತೆ….

MittlemanFinalLecture

ಇದು ನಿನಗೊಂದು ಪುಟ್ಟ ಶ್ರದ್ಧಾಂಜಲಿ.

 

Leave a Reply

Your email address will not be published. Required fields are marked *

6 − five =

This site uses Akismet to reduce spam. Learn how your comment data is processed.