ಅನಂತಕುಮಾರ್‌: ಒಂದು ಖಾಸಗಿ ನಮನ

ಇಂದು ನಮ್ಮನ್ನು ಅಗಲಿದ ಅನಂತಕುಮಾರ್ ಅಂತಿಮ ದರ್ಶನ ಪಡೆದಾಗ ನನ್ನೊಂದಿಗೆ ಬಂದಿದ್ದು ಕಲಾವಿದ ಮಿತ್ರ ದೇವರಾಜ. ೧೯೮೬ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ರಾಜ್ಯದ ಶಿಕ್ಷಣ ಕ್ಷೇತ್ರದ ದುಸ್ಥಿತಿಯ ಬಗ್ಗೆ ಕರಾಳ ಪತ್ರ ರೂಪಿಸಿದವರು ಅನಂತಕುಮಾರ್. ಅವರಿಗೆ ಸಹಾಯಕನಾಗಿ ಲೇಖನಿ ಹಿಡಿದಿದ್ದು ನಾನು. ಕೊನೆಗೆ ಅದಕ್ಕೊಂದು ಅರ್ಥವತ್ತಾದ ಮುಖಪುಟ ಬಿಡಿಸಿದ್ದು ದೇವರಾಜ! ಇಂದು ಮಾತ್ರ ನಮ್ಮಿಬ್ಬರಿಗೂ ಹಿರಿಯ ಮಿತ್ರನೊಬ್ಬನನ್ನು ಕಳೆದುಕೊಂಡ ಕರಾಳ ದಿನದಂತೆ ಅನ್ನಿಸಿತ್ತು.

ಆ ಕರಾಳ ಪತ್ರವನ್ನು ಪಿ.ಲಂಕೇಶರೇ ಲಂಕೇಶ್ ಪತ್ರಿಕೆಯಲ್ಲಿ ಅತ್ಯಂತ ಹೃತ್ಪೂರ್ವಕವಾಗಿ ಶ್ಲಾಘಿಸಿ, ಎಬಿವಿಪಿಯ ಒಂದು ಒಳ್ಳೆಯ ಕೆಲಸ ಎಂದು ಒಂದು ಪುಟ ವರದಿ ಮಾಡಿಸಿದ್ದರು. ಆ ದಿನಗಳಿಂದ ಈದಿನದವರೆಗೂ ಕರಾಳ ಪತ್ರದ ಮೊನಚು ಶೈಲಿಯನ್ನು ಯಾರೂ ಮರೆತಿಲ್ಲ. ಅದಕ್ಕೆಲ್ಲ ಕಾರಣ ಅನಂತಕುಮಾರ್. ತಪ್ಪಿಲ್ಲದ ಅಕ್ಷರಗಳು, ಪದ ಪದವನ್ನು ಜೋಡಿಸಿ ಹೊಮ್ಮಿಸುವ ಕಟು ಟೀಕಾವಾಕ್ಯಗಳು – ಎಲ್ಲವೂ ಪುಸ್ತಕದ ಕರಾಳ ಸಂಗತಿಯನ್ನೂ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದವು.

ನಾನು `ವಿಕ್ರಮ’ ಪತ್ರಿಕೆಯ ಸಂಪಾದಕನಾದಾಗ ನನ್ನ ಡೈರಿಯಲ್ಲಿ ಅನಂತಕುಮಾರ್‌ ಬರೆದ ಮಾತುಗಳು

ನಿನ್ನೆ ರಾತ್ರಿಯಷ್ಟೇ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬರುವಾಗ ಅನಂತಕುಮಾರ್‌ಗೆ ಖುಷಿ ಮಾಡಬೇಕು, ಅವರು ನನ್ನ ಡೈರಿಯಲ್ಲಿ ಬರೆದಿಟ್ಟ ಚೌಪದಿಗಳನ್ನು ತಲುಪಿಸಬೇಕು ಎಂದು ಯೋಚಿಸಿದ್ದೆ. ಮುಂಜಾನೆಯೇ ಅವರ ನಿಧನದ ಸುದ್ದಿ ಅಪ್ಪಳಿಸಿತು.

೧೯೮೫ರಲ್ಲಿ ನಾನು ವಿಸ್ತಾರಕನಾಗಿ ಬೆಳಗಾವಿ ಜಿಲ್ಲಾ ಯುವ ಸಮಾವೇಶ ಸಿದ್ಧತೆ ನಡೆಸಲು (ಅದು ಅಂತಾರಾಷ್ಟ್ರೀಯ ಯುವ ವರ್ಷ) ಹೋಗಿದ್ದೆ ಒಂದು ವಾರ ಅಲ್ಲಿದ್ದು ನಾನು ಮಾಡಿದ ಕೆಲಸ ಎಂದರೆ ಯಾವುದೋ ಪ್ರಿನ್ಸಿಪಾಲನ ವಿರುದ್ಧ ಪ್ಲಕಾರ್ಡ್ ಬರೆದಿದ್ದು. ವಾರದ ಕೊನೆಗೆ ಅನಂತಕುಮಾರ್ ಬಂದರು. ಏನೆಲ್ಲ ಯೋಜನೆ ಮಾಡಿದ್ದೀಯ ಎಂದು ಕೇಳಿದರು. ಇರುವ ಸಂಗತಿಯನ್ನೆಲ್ಲ ತಿಳಿಸಿದೆ. ಪರವಾಗಿಲ್ಲ, ಇದ್ದಿದ್ರಲ್ಲೇ ಒಂದಷ್ಟು ಕೆಲಸ ಮಾಡಿದೀಯ ಎಂದು ಬೆನ್ನು ತಟ್ಟಿದರು.

೧೯೮೬ರಲ್ಲಿ ದಾವಣಗೆರೆಯಲ್ಲಿ ಎಬಿವಿಪಿಯ ರಾಜ್ಯ ಸಮ್ಮೇಳನ. ಮೂರು ವರ್ಷಗಳ ಹಿಂದೆ ದುರ್ಬಲವಾಗಿದ್ದ ಎಬಿವಿಪಿ ಶಾಖೆಯನ್ನು ರಾಜ್ಯ ಸಮ್ಮೇಳನ ಮಾಡುವಷ್ಟರ ಹಂತಕ್ಕೆ ತಂದ ಖುಷಿ ನಮ್ಮದಾಗಿತ್ತು (ನಾನು, ಜಿಕೆ ಸುರೇಶ್, ಮಂಜಪ್ಪ, ತಿಮ್ಮಪ್ಪ, ಹರಿಹರದ ಬಿ ವಿ ವಸಂತಕುಮಾರ್, ಕೃಷ್ಣಮೂರ್ತಿ ಶೆಟ್ಟರು, ವೀರಣ್ಣ, ಬ. ರಾಜಶೇಖರ ವೀಣಾ, ವಿಶ್ವೇಶ್ವರ, ದುರ್ಗದ ಅರುಣಕುಮಾರ್ ಹೀಗೆ ಚಿತ್ರದುರ್ಗ ಜಿಲ್ಲೆ ಅನ್ನಿ). ಆಗ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಂದನಾ ರಾವ್ ಮುಖ್ಯ ಅತಿಥಿ. ಅನಂತಕುಮಾರ್ ಅಂದು ಮಾಡಿದ ಭಾಷಣ ತುಂಬಾ ಜನಪ್ರಿಯವಾಗಿತ್ತು.

೧೯೮೭ರಲ್ಲಿ ಅನಂತಕುಮಾರ್ ಎಬಿವಿಪಿ ಬಿಟ್ಟು ಬಿಜೆಪಿ ಸೇರುವರು ಎಂಬ ಘೋಷಣೆ ಆಗಿದ್ದು ಬಾಗಲಕೋಟೆಯಲ್ಲಿ ನಡೆದ ಪ್ರಾಂತ ಅಭ್ಯಾಸವರ್ಗದಲ್ಲಿ. ಆಗ ಗೋಡೆ ಪತ್ರಿಕೆಯನ್ನೂ ನಡೆಸುತ್ತ ಭಾಗವಹಿಸಿದ್ದ ನಾನು ಮತ್ತು ಕೆಲವರು ಈ ವಿದಾಯದ ಬೇಸರದಿಂದ ಕಣ್ಣೀರು ಹಾಕಿದ್ದೆವು. ಅನಂತಕುಮಾರ್ ನಮ್ಮನ್ನು ಸಮಾಧಾನ ಮಾಡಿದ್ದರು. ಆಗಿನ ಬಿಜೆಪಿ ರಾಜ್ಯ ಕಚೇರಿಯೂ ಕಾಟನ್‌ಪೇಟೆಯಲ್ಲೇ ಇದ್ದಿದ್ದರಿಂದ ನಾವು ಕೊಂಚ ರಾಜಿ ಮಾಡಿಕೊಂಡೆವು. ಬಿಜೆಪಿ ಸೇರಿದಾಗ ಅವರಿಗೆ ೫೦೦ ರೂ. ಖರ್ಚಿಗೆ ಕೊಡುತ್ತಿದ್ದರು, ಜೊತೆಯಲ್ಲಿ ಸ್ಕೂಟರ್-ಪೆಟ್ರೋಲ್ ಸೌಕರ್ಯ ಇತ್ತು. ಆಗ ಎಬಿವಿಪಿ ಕಚೇರಿಗೇ ಬಂದು (ನಂ ೯ ಕೆ ಕೆ ಲೇನ್ ವಿಳಾಸದ ಈ ಕಚೇರಿ ಈಗಿನ ಕಾಲದ ಸುಪ್ರಸಿದ್ಧರ ಸಂಘಟನಾ ಕೇಂದ್ರವಾಗಿತ್ತು) ಹರಟೆ ಹೊಡೆಯುತ್ತಿದ್ದರು.

ಇದಕ್ಕಿಂತ ಇನ್ನಷ್ಟು ಹಿಂದೆ ಹೋಗುವೆ. ೧೯೮೨-೮೩ರ ವರ್ಷದಲ್ಲಿ ಅಸಾಂ ಹತ್ಯಾಕಾಂಡ ನಡೆದಿತ್ತು. ಅಸಾಂ ಹೋರಾಟ ತೀವ್ರವಾಗಿತ್ತು. ಆಗ ದಾವಣಗೆರೆಯಲ್ಲಿ ಈ ಕುರಿತ ಸಭೆ ನಡೆಸಲು ಅನಂತಕುಮಾರ್ ಬಂದಿದ್ದರು. ಪತ್ರಿಕಾಗೋಷ್ಠಿಗೆಂದು ತಯಾರಿಸಿದ ಟಿಪ್ಪಣಿಯನ್ನು ನನಗೆ ಕೊಟ್ಟು ಏನಾದ್ರೂ ತಪ್ಪಿದ್ರೆ ತಿದ್ದು’ಎಂದರು. ಪುಡಿ ಕವಿಯಾಗಿದ್ದ ನಾನು ಪೆನ್ನು ಹಿಡಿದು ತಿದ್ದಲು ಕಣ್ಣಾಡಿಸಿದೆ. ಒಂದಾದರೂ ತಪ್ಪು ಇದ್ದರೆ ತಾನೆ? ಅವರ ಅಕ್ಷರಗಳೇನೋ ಅವರದೇ ಮೋಡಿಯಲ್ಲಿ ಇರುತ್ತಿದ್ದವು; ೨೦೧೮ರ ಮೇ ತಿಂಗಳಿನಲ್ಲೂ ಅವು ಹಾಗೆಯೇ ಇದ್ದವು! ಆದರೆ ವಾಕ್ಯರಚನೆಯಿಂದ ಹಿಡಿದು ಪದಗಳ ಬಳಕೆ, ನಿರೂಪಣೆಯ ಹಂತ – ಎಲ್ಲೂ ಯಾವುದೇ ಲೋಪ ಇರಲಿಲ್ಲ. ಟೈಪ್ ಮಾಡಿಸಲು ಸಿದ್ಧವಾಗಿತ್ತು. ವಿದ್ಯಾರ್ಥಿ ಪರಿಷತ್ತಿನಲ್ಲಿ ಇರುವಷ್ಟು ಕಾಲ, ಅನಂತರದ ಅವರ ಬಿಜೆಪಿ ದಿನಗಳಲ್ಲಿ ನಾನು ಎಬಿವಿಪಿಯಲ್ಲಿ ಇದ್ದ ಕಾಲದಲ್ಲಿ ಹಲವು ಬೈಠಕ್‌ಗಳಲ್ಲಿ ಅವರ ಸಹವಾಸ ನನಗೆ ಸಿಕ್ಕೇ ಸಿಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ: ಅವರೊಳಗೊಬ್ಬ ಕವಿ ಇದ್ದ. ಹೋತಾನಂದ ಎಂಬ ಕಾವ್ಯನಾಮದಲ್ಲಿ ಅನಂತಕುಮಾರ್ ಹಲವು ಚೌಪದಿಗಳನ್ನು ಬರೆದಿದ್ದಾರೆ. ನಾನು ಯಾವುದೇ ಹೊಸ ಡೈರಿಯನ್ನು ಪಡೆದ ಮುಂದಿನ ಬೈಠಕ್ಕಿನಲ್ಲಿ ಅದನ್ನು ಅವರಿದ್ದ ಕಡೆಗೆ ದಾಟಿಸುತ್ತಿದ್ದೆ. ನನ್ನ ನೋಡಿ ಕಣ್ಣು ಮಿಟುಕಿಸಿ ಡೈರಿಯ ಮೊದಲನೇ ಪುಟದಲ್ಲಿ ಒಂದು ಹೋತಾನಂದ ವಚನವನ್ನು ಬರೆದು ನನಗೆ ಕಳಿಸುತ್ತಿದ್ದರು. ಡೈರಿಯ ಮೊದಲ ಪುಟದಲ್ಲಿ ಏನಾದರೂ ಒಳ್ಳೆಯ ಸಂದೇಶ ಇರಬೇಕೆಂಬ ನನ್ನ ಹಂಬಲವನ್ನು ಅವರು ಚೆನ್ನಾಗಿ ಅರಿತಿದ್ದರು. ಒಂದೆರಡು ಸಲ ನನ್ನ ಡೈರಿಯನ್ನು ಕಸಿದುಕೊಂಡು ಹೋತಾನಂದ ವಚನವನ್ನು ಬರೆದುಕೊಟ್ಟಿದ್ದೂ ಇದೆ.

೧೯೯೫ರಲ್ಲಿ ನಾನು ಬೆಂಗಳೂರಿಗೆ ಬಂದೆ. ಹೊಸದಿಗಂತದಲ್ಲಿದ್ದ ನಾನು ರಾತ್ರಿ ಪಾಳಿಯನ್ನೇ ಮುಂದುವರಿಸಿದ್ದೆ. ಬಿಜೆಪಿ ಕಚೇರಿಗೆ ಹೋಗಿ ಪಕ್ಷದ ಸಾಹಿತ್ಯ ರಚನೆ, ಮ್ಯಾಗಜಿನ್ – ಇವೆಲ್ಲವನ್ನೂ ಇತರರೊಂದಿಗೆ ನೋಡಿಕೊಳ್ಳುತ್ತಿದ್ದೆ. ೧೯೯೬ರಲ್ಲಿ ಅನಂತಕುಮಾರ್ ಲೋಕಸಭಾ ಸದಸ್ಯರಾದಾಗ ನನಗೆ ಮತ್ತು ನನ್ನ ಆಗಿನ  ಪತ್ರಕರ್ತ ಮಿತ್ರನಿಗೆ  ಅನ್ನಿಸಿದ್ದು ಒಂದೇ ವಿಚಾರ: ಹೇಗಾದ್ರೂ ಮಾಡಿ ಒಂದು ಟೆಲಿಫೋನ್ ಸಂಪರ್ಕ ಪಡೆದುಕೊಳ್ಳಬೇಕು. ಇದಕ್ಕಾಗಿ ಆ ಪತ್ರಕರ್ತನಿಂದ ನನ್ನ ಕಚೇರಿ ದೂರವಾಣಿಗೆ ಹಲವಾರು ಸಲ ಕರೆಗಳು ಬಂದವು. ನಾನು ಆಗಿ ಅನಂತಕುಮಾರ್ ಜೊತೆ ಮಾತನಾಡಿ, ಅವರು ತಿಳಿಸಿದಂತೆ ಇಬ್ಬರ ಅರ್ಜಿಗಳನ್ನೂ ಸಲ್ಲಿಸಿದೆ. ಸಂಸದರ ಕೋಟಾದಲ್ಲಿ ಒಂದೇ ಒಂದು ಲೈನ್ ಬಾಕಿ ಉಳಿದಿತ್ತು. ಆಗ ಅನಂತಕುಮಾರ್ ತೀರ್ಮಾನದಂತೆ ನನಗೆ ಈ ಸಂಪರ್ಕವನ್ನು ಕಲ್ಪಿಸಲಾಯಿತು. ಈಗಲೂ ೩೪೮೨೧೦೩ ಸಂಖ್ಯೆಯ ದೂರವಾಣಿ ನನಗೆ ಮಂಜೂರಾದ ಪತ್ರ ನನ್ನ ಕಡತದಲ್ಲಿದೆ. ಅನಂತಕುಮಾರ್ ಕೇಂದ್ರ ಸಚಿವರಾದ ಮೇಲೆ ನಾನು ಅವರಿಂದ ಮಾಡಿಸಿಕೊಂಡ ಇನ್ನೊಂದು ಕೆಲಸ ಎಂದರೆ ಸಿರಿಭೂವಲಯದ ಮೂಲ ಪ್ರತಿಗಳನ್ನು ನೋಡಲು ದಿಲ್ಲಿ ಆರ್ಕೈವ್ಸ್ ಕಚೇರಿಯ ಪ್ರವೇಶ ಪಡೆದಿದ್ದು. ಸಿರಿಭೂವಲಯ ಎಂದರೆ ಅವರಿಗೇನೂ ಗೊತ್ತಿರಲಿಲ್ಲ.ಬೇಮ’ (ನಾನು ಎಬಿವಿಪಿಯಲ್ಲಿ ಬೇಮ ಎಂದೇ ಪ್ರಸಿದ್ಧ. ಅದು ನನ್ನ ಇನಿಶಿಯಲ್ಲೂ ಹೌದು. ಆಗಿನ/ಈಗಿನ ಕಾಲದ ಅನ್ವರ್ಥವೂ ಹೌದು: ಬೇಜವಾಬ್ದಾರಿ ಮನುಷ್ಯ!) ಕೇಳಿದ್ದನ್ನು ಮಾಡಿಕೊಡುವ ಎಂಬ ಮನಸ್ಸು ಅವರದು.

೨೦೦೧ರಿಂದ ೨೦೦೮ರವರೆಗೂ ನಾನು ಅನಂತಕುಮಾರ್ ಆಗಲಿ, ಇತರೆ ಸಂಘಟನಾ ಪದಾಧಿಕಾರಿಗಳಾಗಲೀ, ಯಾರ ಸಂಪರ್ಕವನ್ನೂ ಅಷ್ಟಾಗಿ ಇಟ್ಟುಕೊಳ್ಳಲಿಲ್ಲ. ಆಗ ನಾನು ನಮ್ಮ ಪರಿವಾರದಲ್ಲೇ ಹುಟ್ಟಿ ನಮ್ಮ ಸಮಾಜಕ್ಕೇ ಕಂಟಕನಾದ ವ್ಯಕ್ತಿಯ ಮೋಡಿಯಲ್ಲಿ ಬಿದ್ದಿದ್ದೆ. ಆ ವಿಷಯ ಈಗ ಬರೆಯುವುದಿಲ್ಲ.

೨೦೦೮ರ ವಿಧಾನಸಭಾ ಚುನಾವಣಾ ದಿನಗಳಲ್ಲಿ ನಾನು ಅರುಣ್ ಜೈಟ್ಲಿಯವರ ಹಠಾತ್ ಸೂಚನೆಯಂತೆ ಯೆಡ್ಯೂರಪ್ಪನವರ ಸ್ಟ್ರಾಟೆಜಿ ರೂಮು ಸೇರಿಕೊಂಡೆ. ಅಲ್ಲಿ ಮೂರು ತಿಂಗಳು ಕೆಲಸ ಮಾಡಿದ ಮೇಲೆ ಯೆಡ್ಯೂರಪ್ಪನವರಿಗೆ ವಿನಂತಿ ಮಾಡಿ ಹೊರಬಂದೆ; ಬಿಜೆಪಿಗೆ ಅಧಿಕಾರ ಬಂದಮೇಲೂ ಯಾಕೆ ಹೊರಗೆ ಬಂದೆ ಎಂಬ ಪ್ರಶ್ನೆಗಳನ್ನು ಎದುರಿಸಬೇಕಾಗಿದ್ದು ಈಗ ಇತಿಹಾಸ! ಆ ಹೊತ್ತಿನಲ್ಲಿ ಮತ್ತೆ ಕೆಲಸದ ಅಗತ್ಯ ಬಿತ್ತು. ನಾನು ಹಿಂದೆ ಕೆಲಸ ಮಾಡಿದ ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನಲ್ಲಿ ನನ್ನ ರಾಜೀನಾಮೆಯನ್ನು ಅಮಾನತಿನಲ್ಲಿ ಇಟ್ಟಿದ್ದರು. ಅವರನ್ನು ವಿನಂತಿಸಿದಾಗ ಮತ್ತೆ ಬಡ್ತಿಯೊಂದಿಗೆ ಬೆಂಗಳೂರಿನಲ್ಲೇ ಕೆಲಸ ಕೊಡುವುದಾಗಿ ತಿಳಿಸಿದರು. ಇನ್ನೇನು ಕೆಲಸಕ್ಕೆ ಸೇರಬೇಕು ಎನ್ನುವಷ್ಟರಲ್ಲಿ ಅನಂತಕುಮಾರ್‌ರಿಂದ ಕರೆ ಬಂತು. ಅವರು ಮತ್ತು ತೇಜಸ್ವಿನಿ ಅನಂತಕುಮಾರ್ ಇಬ್ಬರೂ ನನ್ನನ್ನು ಕರೆದು ಅದಮ್ಯ ಚೇತನಕ್ಕಾಗಿ ಕೆಲಸ ಮಾಡಬೇಕು; ಅಮೃತಾ ಇಂಜಿನಿಯರಿಂಗ್ ಕಾಲೇಜನ್ನು ದೇಶದ ಉತ್ಕೃಷ್ಟ ಜ್ಞಾನಕೇಂದ್ರ ಮಾಡಬೇಕು; ಅದರ ಕಾರ್ಯತಂಡದಲ್ಲಿ ನೀನೂ ಸೇರಬೇಕು ಎಂದರು. ಅವರೇ ಕೊನೆಗೆ ಸಜ್ಜನ್ ಜಿಂದಾಲ್‌ಗೆ ಕರೆ ಮಾಡಿ ನಾನು ಅವರ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದರು.

೨೦೦೮ರಿಂದ ೨೦೦೯ರ ಮೇವರೆಗೆ ನಾನು ಅದಮ್ಯ ಚೇತನದಲ್ಲಿ ಕೆಲಸ ಮಾಡಿದೆ; ಆಗ ನನಗೆ ತೇಜಸ್ವಿನಿ ಅನಂತಕುಮಾರ್ ಅವರ ದೈತ್ಯ ವೃತ್ತಿಪರತೆ, ದೂರದೃಷ್ಟಿ, ಕಾರ್ಯ ಸಂಸ್ಕೃತಿ – ಇವೆಲ್ಲದರ ಪರಿಚಯ ಆಯಿತು. ಕೆಲಕಾಲ ನಾನು ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಆಗಿಯೂ ಕಾರ್ಯ ನಿರ್ವಹಿಸಿದೆ. ಈ ದಿನಗಳಲ್ಲಿ ನಾನು ಅನಂತಕುಮಾರ್ ಮತ್ತು ತೇಜಸ್ವಿನಿಯವರೊಂದಿಗೆ ಹಲವು ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಮುಖ್ಯವಾಗಿ ಅದ್ಯ ಚೇತನದಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ಒಂದು ಮಾಸಿಕ ಗೋಡೆ ಪತ್ರಿಕೆಯನ್ನು ರೂಪಿಸಿದ ಖುಷಿ ನನ್ನದು. ಅದರ ಆರಂಭದ ಸಂಚಿಕೆಗಳನ್ನು ರೂಪಿಸುವಾಗ ತೇಜಸ್ವಿನಿಯವರು ಪಾಲ್ಗೊಂಡ ಬಗೆ ತುಂಬಾ ನೆನಪಿನಲ್ಲಿ ಉಳಿದಿದೆ. ಅದಮ್ಯ ಚೇತನ ಎಂದರೆ ಒಬ್ಬ ರಾಜಕಾರಣಿಯ ಸೇವಾ ಚಟುವಟಿಕೆಗಳನ್ನು ಪ್ರಚಾರ ಮಾಡುವ ಶೋಪೀಸ್ ಎಂದೇ ನಾನೂ ತಿಳಿದಿದ್ದೆ. ಆದರೆ ನನ್ನ ಈ ತಪ್ಪು ಅಭಿಪ್ರಾಯ ಮೊದಲ ದಿನಗಳಲ್ಲೇ ಬದಲಾಯಿತು. ಅದಮ್ಯ ಚೇತನದಲ್ಲಿ ಕೆಲಸ ಮಾಡುವ ಹುಡುಗರು, ವನಿತೆಯರು – ಎಲ್ಲರೂ ಕರ್ನಾಟಕದ ವಿವಿಧ ಭಾಗಗಳನ್ನು ಪ್ರತಿನಿಧಿಸಿದ್ದರು. ಅದರಲ್ಲೂ ಕೆಲಸವಿಲ್ಲದೆ ಬೆಂಗಳೂರಿಗೆ ವಲಸೆ ಬಂದ ಬಯಲುಸೀಮೆ ಹುಡುಗರೇ ಹೆಚ್ಚಾಗಿದ್ದರು. ಅವರ ನಾಟಿ ಭಾಷೆ, ಗಲಾಟೆ, ಗೌಜು, ತಂಟೆ ಎಲ್ಲವನ್ನೂ ತೇಜಸ್ವಿನಿಯವರು ನಿಭಾಯಿಸಿಕೊಂಡು ಬಂದಿದ್ದಾರೆ. ಇಸ್ಕಾನ್‌ಗೆ ಸಾಟಿಯಾಗಿ ಅಲ್ಲ, ಅದಕ್ಕಿಂತ ಒಂದು ಹೆಜ್ಜೆ ಮೇಲೇ ಅದಮ್ಯ ಚೇತನದ ಮಧ್ಯಾಹ್ನದೂಟ ಕಾರ್ಯಕ್ರಮವನ್ನು ರೂಪಿಸಿದ್ದಾರೆ . ಇಸ್ಕಾನ್‌ನಲ್ಲಿ ಇರುವ ಪಾಲಿಶ್ ವಾತಾವರಣ, ಮಾರ್ಕೆಟಿಂಗ್ ಶೈಲಿ, ವಿದೇಶಗಳಲ್ಲಿ ಮಕ್ಕಳನ್ನು ತೋರಿಸಿ ದಾನ ಕೀಳುವ ವರಸೆ – ಇದಾವುದೂ ಅದಮ್ಯ ಚೇತನದಲ್ಲಿ ಇರಲಿಲ್ಲ; ಈಗಲೂ ಇಲ್ಲ. ಬರುಬರುತ್ತ ಅದಮ್ಯ ಚೇತನವು ಹೇಗೆ ದಿನಕ್ಕೆ ೭೦ ಸಾವಿರ ಮಕ್ಕಳಿಗೆ ಊಟ ತಯಾರು ಮಾಡಿಯೂ ಶೂನ್ಯ ತ್ಯಾಜ್ಯದ ಕೇಂದ್ರವಾಯಿತು, ಬಿಬಿಎಂಪಿ ಲಾರಿಗಳೇ ಬರದಂತೆ ತ್ಯಾಜ್ಯವನ್ನು ನಿರ್ವಹಿಸಿತು ಎಂಬುದನ್ನು ಇನ್ನೊಂದು ಲೇಖನದಲ್ಲಿ ಬರೆದಿದ್ದೇನೆ, ನೋಡಿ. ನಾನು ಕೆಲವೇ ತಿಂಗಳುಗಳು ಅಲ್ಲಿದ್ದರೂ, ಅಲ್ಲಿನ ಜನರ ಪ್ರೀತಿ ಈಗಲೂ ಅಬಾಧಿತ. ನಾನು ಹೋದೆನೆಂದರೆ ಸಾಕು ಪ್ರೀತಿಯ ನಮಸ್ಕಾರ, ಚಹಾ ಸಿಕ್ಕೇ ಸಿಗುತ್ತದೆ.

೨೦೦೯ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಅನಂತಕುಮಾರ್ ಅವರ ಪ್ರಚಾರ ಸಾಹಿತ್ಯ, ವೆಬ್‌ಸೈಟ್ – ಹೀಗೆ ಎಲ್ಲ ಅಭಿಯಾನಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದೆ. 

೨೦೧೪ರ ಲೋಕಸಭಾ ಚುನಾವಣೆಯಲ್ಲಿ ನಾನು ಮತ್ತೆ ಅನಂತಕುಮಾರ್ ಅವರ ಹಲವು ಪ್ರಚಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡೆ. ಅವರ ಗೆಲುವಿನ ದಿನ ಅವರಿಂದಲೇ ಸಿಹಿ ಪಡೆದೆ. ಅನಂತರ ಅವರು ಆರಂಭಿಸಿದ ಹಸುರು ಅಭಿಯಾನದ ಹಲವು ಸಭೆಗಳಲ್ಲಿ ಭಾಗಿಯಾದೆ. ಅದಾಗಿ ಒಂದು ವರ್ಷಕ್ಕೇ ನಾನು ಮೈಸೂರಿಗೆ ಬಂದೆ.

ಕಳೆದ ವರ್ಷ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮುನ್ನ ನನಗೆ ಕರೆ ಮಾಡಿಸಿ ಕನ್ನಡ ಭಾಷಾ ತಂತ್ರಜ್ಞಾನ ಬೆಳವಣಿಗೆ ಕುರಿತ ಸವಾಲುಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು; ಆಗ ಚಂಪಾ ಅವರ ಸಾಹಿತ್ಯ ಸಮ್ಮೇಳನದ ರಾಜಕೀಯಕರಣದ ಸುದ್ದಿಯೇ ಎಲ್ಲೆಲ್ಲೂ ಇತ್ತು. ಆದ್ದರಿಂದ ಅನಂತಕುಮಾರ್ ತಮ್ಮ ಭಾಷಣವನ್ನೆಲ್ಲ ಚಂಪಾ ಮತ್ತು ಅವರ ಪಟಾಲಂಗೆ ಉತ್ತರ ಕೊಡಲು ಮೀಸಲಿಟ್ಟರು. ಸಾಹಿತ್ಯ ಸಮ್ಮೇಳನಗಳನ್ನು ರಾಜಕೀಯಕ್ಕೆ ಎಳೆಸಿದ ಬಗ್ಗೆ ಸಂಘಟಕರನ್ನು ತರಾಟೆಗೆ ತೆಗೆದುಕೊಂಡರು. ಕನ್ನಡದ ಜ್ಞಾನ ಪ್ರಸಾರಕ್ಕೆ ಡಿಜಿಟೈಸೇಶನ್ ಒಂದೇ ಪರಿಹಾರ ಎಂದೂ ಸಭೆಗೆ ತಿಳಿಸಿದರು. ಅಂದಹಾಗೆ ೨೦೧೨ರಲ್ಲಿ ಸರ್ಕಾರದ ಎಲ್ಲ ಲೇಖನ ವ್ಯವಹಾರಗಳೂ ಯುನಿಕೋಡ್‌ನಲ್ಲೇ ಇರಬೇಕು ಎಂಬ ಅಧಿಕೃತ ಸುತ್ತೋಲೆಯ ಪ್ರಕಟವಾಗಲೂ ಅನಂತಕುಮಾರ್ ಅವರೇ ಕಾರಣ ಎಂಬುದನ್ನು ಗಮನಿಸಬೇಕು.

ಈ ಬ್ಲಾಗಿನಲ್ಲಿ ನಾನು ಹೇಳಬೇಕಿದ್ದುದು ನನ್ನ ವಿಷಯವಲ್ಲ; ಅನಂತಕುಮಾರ್ ಮತ್ತು ನನ್ನ ನಡುವಣ ಸಂಬಂಧದ ಏರಿಳಿತಗಳನ್ನು. ಬೈಟ್‌ಗಳನ್ನು ಕೊಡಲು ನಾನು ರಾಜಕಾರಣಿಯೂ ಅಲ್ಲ; ನಾನು ಎಂಬ ಅಂಶ ಹೆಚ್ಚಾಗಿದ್ದರೆ ಮನ್ನಿಸಿ. 

ಮುಖ್ಯವಾಗಿ ಅನಂತಕುಮಾರ್ ಪಕ್ಷ ರಾಜಕಾರಣ ಪ್ರವೇಶ ಮಾಡುವ ಮುನ್ನವೇ ನೂರಾರು ಅಭಿಮಾನಿಗಳನ್ನು ಹೊಂದಿದ್ದರು; ತಮ್ಮದೇ ಆದ ಕಾರ್ಯಶೈಲಿಯನ್ನು ರೂಢಿಸಿಕೊಂಡಿದ್ದರು ಎಂಬ ಅಂಶವನ್ನು ಗಮನಿಸಬೇಕು. ಈಗ ರಾಜಕೀಯ ಕಾರಣಗಳಿಗಾಗಿ ಅವರ ಹಿಂದೆ ಮುಂದೆ ತಿರುಗುವ ಸಾವಿರಾರು ಜನ ಇದ್ದಾರೆ; ಅದೇನೂ ತಪ್ಪಲ್ಲ. ಆದರೆ ಇವತ್ತಿನ ರಾಜಕಾರಣದ ಇತಿಹಾಸವನ್ನಷ್ಟೇ ಬಿಂಬಿಸಿದರೆ ಅನಂತಕುಮಾರ್‌ಗೆ ಅನ್ಯಾಯ ಮಾಡಿದಂತೆ. ನನಗಂತೂ ರಾಜಕಾರಣದ ಅನಂತಕುಮಾರ್‌ಗಿಂತ ಎಬಿವಿಪಿಯ ಅನಂತಕುಮಾರ್ ತುಂಬಾ ಇಷ್ಟ.

ನನಗಂತೂ ರಾಜಕಾರಣದ ಅನಂತಕುಮಾರ್‌ಗಿಂತ ಎಬಿವಿಪಿಯ ಅನಂತಕುಮಾರ್ ತುಂಬಾ ಇಷ್ಟ.

ಇಷ್ಟೆಲ್ಲ ನೆನಪುಗಳ ನಂತರ ಕೊನೆಗೆ ಉಳಿಯುವುದಾದರೂ ಏನು ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತದೆ. ಅನಂತಕುಮಾರ್ ನಮಗೆ ಕೊಟ್ಟಿದ್ದೆಷ್ಟು, ಬಿಟ್ಟಿದ್ದೇನು?

ಒಂದು: ಬದುಕಿನ ಏರಿಳಿತಗಳೇನೇ ಇರಲಿ, ನಗೆಚಟಾಕಿ ಹಾರಿಸುವುದನ್ನು ಬಿಡಬಾರದು.

ಎರಡು: ಬದುಕು ಎಂದರೆ ಶೂ ಒಳಗಿನ ಕಲ್ಲಿನ ಚೂರಿದ್ದಂತೆ. ಹಾಗೇ ಅನುಭವಿಸಬೇಕು.

ಮೂರು: ಹೋತಾನಂದನ ರೀತಿಯಲ್ಲಿ ಬದುಕಿಗೊಂದು ಫಿಲಾಸಫಿಕಲ್ ನೋಟ ಪಡೆದುಕೊಳ್ಳಬೇಕು.

ನಾಲ್ಕು: ಕನ್ನಡದಲ್ಲೇ ಚಿಂತಿಸಬೇಕು; ಕನ್ನಡದಲ್ಲೇ ಬರೆಯಬೇಕು; ಕನ್ನಡದಲ್ಲೇ ಮಾತನಾಡಬೇಕು.

ಐದು: ನಾಮಕಾವಸ್ಥೆ ಸಮಾಜಸೇವೆ ಮಾಡಬಾರದು; ಮಾಡಿದರೆ ಅದು ಮಾದರಿ ಆಗಿರಬೇಕು (ಅದಮ್ಯ ಚೇತನ).

ಮುಂದೆ? ಅನಂತಕುಮಾರ್ ಬಿಟ್ಟುಹೋದ ರಾಜಕಾರಣದ ಜಾಗ ತುಂಬುವವರಾರು, ಅವರಂತಹ ಬ್ರಾಹ್ಮಣ ನಾಯಕ ಸಿಗುವರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಾರು? ತೇಜಸ್ವಿನಿ ಅನಂತಕುಮಾರ್ ರಾಜಕೀಯಕ್ಕೆ ಬರುವರೆ?- ಇತ್ಯಾದಿ ಚರ್ಚೆಗಳು ನಡೆಯುತ್ತವೆ. ಅವುಗಳಿಗೂ ಈ ಬ್ಲಾಗಿಗೂ ಸಂಬಂಧವಿಲ್ಲ. ಇದು ವಿದ್ಯಾರ್ಥಿಪರಿಷತ್ತಿನ ಕಾರ್ಯಕರ್ತನೊಬ್ಬನ ಬ್ಲಾಗ್ ಎಂದೇ ಪರಿಗಣಿಸಿ ಓದಿ. ಇದು ರಾಜಕಾರಣಿಯನ್ನು ಕುರಿತ ಬ್ಲಾಗ್ ಅಲ್ಲ. ನಾಳೆ ಪತ್ರಿಕೆಗಳಲ್ಲಿ ಬರಬಹುದಾದ ಲೇಖನಗಳ ಜೊತೆಗೆ ಈ ಬ್ಲಾಗನ್ನು ಖಂಡಿತ ಹೋಲಿಸಬೇಡಿ. ಇದು ಏನಿದ್ದರೂ ರಾಜಕಾರಣದ ಹಲವು ಅನಿವಾರ್ಯತೆಗಳೊಂದಿಗೇ, ರಾಜಕಾರಣದೊಂದಿಗೇ ಬಂದ ಅಧಿಕಾರದ ಬಳಕೆಯೊಂದಿಗೇ ತನ್ನ ಕವಿಮನಸ್ಸನ್ನು, ಸಮಾಜಕ್ಕಾಗಿ ಗಂಭೀರವಾಗಿ ಸೇವೆ ಸಲ್ಲಿಸಬೇಕು ಎಂಬ ಆಶಯವನ್ನು ಸದಾ ಕಾಪಿಟ್ಟುಕೊಳ್ಳಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತನೊಬ್ಬನ ಚಿಕ್ಕ ಸ್ಮರಣೆ.

ಕೊನೆಯದಾಗಿ…. ಈ ಮೂರ್ನಾಲ್ಕು ತಿಂಗಳುಗಳ ಕಾಲ ಅನಂತಕುಮಾರ್ ಬಗ್ಗೆ ಗಾಢ ಮೌನದ ಸನ್ನಿವೇಶವೊಂದನ್ನು ನಾವೆಲ್ಲರೂ ಅನುಭವಿಸಿದೆವು. ಕೇಳಲಾಗದ, ಹೇಳಲಾಗದ ಸ್ಥಿತಿಯಲ್ಲೇ ಕಾಲ ಕಳೆದೆವು. ನಮ್ಮ ಸ್ಥಿತಿಯೇ ಹೀಗಿದ್ದರೆ ಅವರ ಪತ್ನಿ ತೇಜಸ್ವಿನಿಯವರು ಹೇಗೆ ಈ ಸನ್ನಿವೇಶವನ್ನು ಎದುರಿಸಿರಬಹುದು? ಊಹಿಸಿಕೊಳ್ಳಲೂ ಆಗುತ್ತಿಲ್ಲ. ಅವರು ಮತ್ತು ಅವರ ಮಕ್ಕಳು, ಕುಟುಂಬದ ಎಲ್ಲರೂ ಈ ಶೋಕದ ಕಡಲನ್ನೂ, ಮೌನದ ಕಣಿವೆಯನ್ನೂ ದಾಟಲಿ, ಅನಂತ-ಅದಮ್ಯ ಚೇತನದ ಹಾದಿಯಲ್ಲೇ ಮುನ್ನಡೆಯಲಿ ಎಂದು ನಿರೀಕ್ಷಿಸೋಣ.   

ಅನಂತಕುಮಾರ್‌ಜಿ, ನಿಮ್ಮ ಬೇಮ ಸುದರ್ಶನನ ಅಂತಿಮ ನಮನಗಳನ್ನು ಸ್ವೀಕರಿಸಿ.

Leave a Reply

Your email address will not be published. Required fields are marked *

seventeen − four =

This site uses Akismet to reduce spam. Learn how your comment data is processed.