ಪದಬ್ರಹ್ಮ ‘ನಾಣ’ ಮತ್ತು ಆಶುಕವನ!

1983 ರ ದಿನಗಳಲ್ಲಿ ದಾವಣಗೆರೆಯ ಸಿವಿ ಹಾಸ್ಟೆಲ್‌ನಲ್ಲಿ ಪ್ರಜಾವಾಣಿ ಪದರಂಗ ಬಿಡಿಸುವುದು ಎಂದರೆ ಒಂದು ಸವಾಲೇ ಆಗಿತ್ತು. ಏನು ಮಾಡಿದರೂ ಎರಡು ಮೂರು ಪದಗಳು ಸಿಗುತ್ತಲೇ ಇರಲಿಲ್ಲ. ಇದನ್ನು ರಚಿಸಿದವರಿಗೇ ಈ ಪದ ಗೊತ್ತಿರಲಿಕ್ಕಿಲ್ಲ ಎಂದೇ ಅನುಮಾನಪಟ್ಟಿದ್ದೆ. ಆದರೆ ಮೂರ್ನಾಲ್ಕು ವರ್ಷಗಳ ನಂತರ ಇವನ್ನು ರಚಿಸುವ ಪದಬ್ರಹ್ಮನೇ ನನ್ನ ಎದುರಿಗೆ ಬಂದಿದ್ದರು!   

ಕೆ ಎಸ್‌ ನಾಗಭೂಷಣಂ…. ಪ್ರೀತಿಯಿಂದ ಕರೆಯುವುದು ‘ನಾಣ’. ಪ್ರಜಾವಾಣಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ಕಬ್ಬಿಣದ ಕಡಲೆಯಂತಹ ಪದಬಂಧ ರಚನೆಯಲ್ಲಿ ದಾಖಲೆ ನಿರ್ಮಿಸಿದ ಅವರನ್ನು ನಾನು ಭೇಟಿಯಾಗುವೆ ಎಂದು ಊಹಿಸಿರಲೇ ಇಲ್ಲ. ಆದರೆ 1987 – 90ರ ಸಂಕಷ್ಟದ ದಿನಗಳಲ್ಲಿ ಬೆಂಗಳೂರೆಂಬ ಮಹಾನಗರಿಯಲ್ಲಿ ನನಗೆ ಮಾನಸಿಕ ನೆಮ್ಮದಿ, ಆಸರೆ, ಆಹಾರ ಕೊಟ್ಟು ಸಂತೈಸಿದ ಅವರ ಮತ್ತು ಅವರ ಕುಟುಂಬದೆಲ್ಲ ಸದಸ್ಯರನ್ನೂ ಕೃತಜ್ಞತೆಯಿಂದ ಸ್ಮರಿಸುವುದು ನನ್ನ ಕರ್ತವ್ಯವಾಗಿತ್ತು. ಎಷ್ಟೋ ದಿನಗಳ ನಂತರ (ಅವರು 2016 ರಲ್ಲಿ ನಿಧನರಾದರು) ಈ ಹೊಣೆಗಾರಿಕೆಯನ್ನು ಈ ಪುಟ್ಟ ಬ್ಲಾಗಿನ ಮೂಲಕ ನಿರ್ವಹಿಸಲು ಯತ್ನಿಸುತ್ತಿದ್ದೇನೆ.

ಜೆಪಿ ನಗರದ ಅವರ ಮನೆ ವಿಳಾಸ ಈಗಲೂ ಬಾಯಲ್ಲಿದೆ! ಅಷ್ಟರಮಟ್ಟಿಗೆ ಅವರ ಮನೆ ನನ್ನ ಮನೆಯೇ ಆಗಿತ್ತು. ಕಾಟನ್‌ಪೇಟೆಯಿಂದ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ತಲುಪಿದೆ ಎಂದರೆ ಸೀದಾ 2 ಸಂಖ್ಯೆಯ ಬಸ್‌ ಹತ್ತಿ ಜೆಪಿ ನಗರಕ್ಕೆ ಹೊರಡುತ್ತಿದ್ದೆ. ನಾಣ ಕಚೇರಿಯಿಂದ ಬಂದಕೂಡಲೇ ಸುಸ್ತಾಗಿದ್ದರೂ ನನ್ನ ಜೊತೆ ಗಂಟೆಗಟ್ಟಲೆ ಹರಟುತ್ತಿದ್ದರು; ತನ್ನ ಪದಗಳ ಆಟದ ಮೂಲಕ ನನ್ನನ್ನು ಕಿಚಾಯಿಸುತ್ತಿದ್ದರು. ಮಾತಿನ ತರ್ಕದಲ್ಲಿ ಅವರನ್ನು ಮೀರಿಸುವುದು ನಮಗೆ ಸಾಧ್ಯವೇ ಇರಲಿಲ್ಲ.

ಮೊದಲು ಅವರ ಮನೆಯಲ್ಲಿ ಪರಿಚಯವಾಗಿದ್ದೇ ಈಗ ಮ್ಯಾನೇಜ್‌ಮೆಂಟ್‌ ಶಿಕ್ಷಣದಲ್ಲಿ ದೊಡ್ಡ ಹೆಸರಾಗಿರುವ ಡಾ. ಮನಸಾ ನಾಗಭೂಷಣಂ. ಆಮೇಲೆ ಅಕ್ಕ ಸಹನಾ, ತಂಗಿ ನಯನಾ, ತಮ್ಮಂದಿರಾದ ಸಮರ್ಥ ರಾಘವ ಮತ್ತು ಸೋಮ ಭಾರ್ಗವ. ಜೊತೆಗೆ ಅಮ್ಮ ! ಎಲ್ಲರೂ ನನ್ನನ್ನು ನಾನು ಬೆಂಗಳೂರಲ್ಲಿ ಇದ್ದ ಅಷ್ಟೂ ದಿನಗಳ ಕಾಲ ಅಕ್ಕರೆಯಿಂದ ಕಂಡರು; ನನ್ನ ಏಕಾಂಗಿ ಬದುಕಿಗೆ ನೆರವಾದರು; ಬೇಸರ ನೀಗಿಸಿದರು; ಕೊನೆಗೆ ನನ್ನ ಅರೆಬರೆ ದೂರಶಿಕ್ಷಣ ಪದವಿ ಕೋರ್ಸ್‌ ಪಾಸಾಗಲೂ ಅವರ ಮನೆಯೇ ಕಾರಣ!

ಇವತ್ತು ಮನೆಯಲ್ಲಿ ಪುಸ್ತಕಗಳನ್ನು ಜೋಡಿಸುತ್ತಿದ್ದಾಗ ಕಂಡಿದ್ದು: ನಾನು ಬರೆದ ಒಂದು ಕವನ ಮತ್ತು ಅದರ ಮೊದಲ ಸಾಲನ್ನೇ ಇಟ್ಟುಕೊಂಡು ನಾಣ ಬರೆದ ಇನ್ನೊಂದು ಕವನ! ತುಂಡು ಕವಿಯಾದ ನಾನು ಅವರ ಮನೆಯಲ್ಲೂ ಎಷ್ಟೋ ಕವನ ಬರೆದಿದ್ದಿದೆ. 1992 ರ ಒಂದು ದಿನ ಈ ಕವನ ಬರೆಯಲು ಹೊರಟು ಅವರ ಮನೆಯಲ್ಲೇ ಮೊದಲ ಸಾಲು ಗೀಚಿಟ್ಟು ಬಂದಿದ್ದೆ. ಆಮೇಲೆ ಹೋದಾಗ ಅವರು ನನ್ನ ಕವನವನ್ನೇ ತಗೊಂಡು ತಮ್ಮದೇ ಭಾವಲಹರಿಯಿಂದ ಪೂರ್ಣಗೊಳಿಸಿದ್ದರು! ಎರಡನ್ನೂ ಓದಿ.

ಅದಾಗಿ 27 ವರ್ಷಗಳೇ ಕಳೆದುಹೋಗಿವೆ. ಇಳಿವಯಸ್ಸಿನ ನಾಣನ ಜೊತೆ ಮಾತನಾಡಲು ಕೆಲವು ಸಲ ಅವರ ಮನೆಗೆ ಹೋಗಿದ್ದಿದೆ. ಅವರ ಎಂಭತ್ತನೇ ವರ್ಷದ ಸಂದರ್ಭದಲ್ಲಿ ನೀಡಿದ ಪುಟ್ಟ ಹೂಜಿ ಈಗಲೂ ನನ್ನ ಮುಂದಿದೆ. ಅದರ ಮೇಲೆ ಅವರು ಬರೆದ ವಚನ ಹೀಗಿದೆ:

ಮಧುರ ವಚನ ಮನೋಹರ ದೃಷ್ಟಿ ಮೈ ಪುಳಕ

ಸ್ಪರ್ಶಾನುಭವ ಸುಖ ಸುವಾಸಿತ ಗಂಧದ ಭ್ರಮೆ

ಚಪಲ ಚಿತ್ತಕೆ ಭೋಗವನುಣಬಡಿಸುವ ಸಾಧನ

ಸೆಳೆತದಲೆಯಲಿ ತೇಲಿಹೋಯಿತೋ ಕ್ಷಣಕ್ಷಣ

ನಲುಗಿದ ನಿನ್ನೆಗಳು ನಾಳೆಗೆಷ್ಟು ಭದ್ರವೋ

ನಾಗಲೋಚನ

ನನ್ನ ಬದುಕಿನ ಮೇಲೆ ಅಪಾರವಾದ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ನಾಗಭೂಷಣಂ ಕೂಡ ಒಬ್ಬರಾಗಿದ್ದಾರೆ. ಚಿಂತನಶೀಲ, ಕ್ರಿಯಾಶೀಲ, ಜೀವನೋತ್ಸಾಹಿ ವ್ಯಕ್ತಿತ್ವ ಅವರದಾಗಿತ್ತು. ಅವರೊಂದಿಗೆ ಕೆಲಕಾಲ ಕಳೆದೆ ಎಂಬ ಧನ್ಯತಾ ಭಾವ ನನ್ನದಾಗಿದೆ.

Leave a Reply

Your email address will not be published. Required fields are marked *

nine − four =

This site uses Akismet to reduce spam. Learn how your comment data is processed.