ಶೂನ್ಯಗಳ ಕುರಿತು

ನನ್ನ ಹಿರಿಯ ಗೆಳೆಯ, ನನ್ನೊಳಗಿನ ಕವಿಯನ್ನು ತಿದ್ದಿ ತೀಡಿದ ಕಣಜನಹಳ್ಳಿ ನಾಗರಾಜ್ ಈಗಿನ ಪೀಳಿಗೆಯ ಸಾಹಿತಿಗಳಿಗೆ ಗೊತ್ತಿಲ್ಲದ ಕವಿ. ಅವರು ಕವನದ ಮಾರುಕಟ್ಟೆಯಲ್ಲಿ ಏನಾದರೂ ಸ್ಟ್ರಾಟೆಜಿ ಮಾಡಿದ್ದರೆ ಇಷ್ಟು ಹೊತ್ತಿಗೆ ನಾಡಿನ ಪ್ರಖ್ಯಾತ ಕವಿಯಾಗುತ್ತಿದ್ದರು. ಏನೋ, ಗೊತ್ತಿಲ್ಲ, ಒಂಥರದ ನಿಗೂಢ, ಮೌನದ ಹಳ್ಳಿ ಬದುಕಿಗೆ ಹಿಂದಿರುಗಿದರು. ಅವರು ೧೯೮೪ರ ಒಂದು ಚಳಿಗಾಲದ ದಿನ ಭದ್ರಾವತಿ ಆಕಾಶವಾಣಿಯಲ್ಲಿ ನನ್ನೊಂದಿಗೆ ಇದ್ದು ಕವನ ಓದಿದರು. ಅದೇ ಕವನ ಈಗಲೂ ನನ್ನೊಳಗೆ ಭದ್ರವಾಗಿದೆ. ನಿಮಗಾಗಿ ಈ ಕವನ….. ಇಲ್ಲಿದೆ. 

ಅಲ್ಪಜೀವಿಯು ನಾನು, ಓ ಗೆಳೆಯರೆ,

ಸ್ತಬ್ಧ ಮೌನದ ಹಾಡ ನುಡಿಸಲಾರೆ.

ಅಗಾಧತೆಯ ಒಂದಂಶ ನಾನೇ ಆಗಿ ಹೊಸ

ನಕ್ಷತ್ರಗಳ ಸ್ನೇಹ ಬಯಸಲಾರೆ.

 

ಯಾವುದೋ ನದಿಯ ಹೊಸ ರೋಮಾಂಚನದ

ಧ್ವನಿಯು ನನ್ನ ಹುಡುಕಾಡಿದ್ದು ಇಲ್ಲಿ ತಾನೆ?

ಗೂಢ ನಾದದ ರೂಢ ಶಬ್ದಗಳ ಜಗಳದಲಿ 

ಒಬ್ಬಂಟಿ ನಡುಗಿದ್ದು ಇಲ್ಲಿ ನಾನೆ.

 

ಮಾನವೀಯತೆಯ ವಿಚಿತ್ರ ವೇಷಗಳ ನಡುವೆ

ಮೂಲತತ್ವಗಳಲ್ಲಿ ಬೇರೂರಲು

ಬಯಸಿ ಬಾಯ್ತೆರೆದದ್ದು ಮಾತ್ರ ನಿಜ

ಈ ಹರೆಯದೆದೆ ಮಾತೃಭಾಷೆಯೊಳಗೆ

 

ನನ್ನ ಹಳ್ಳಿಯ ಹಳೆಯ ಕೋಟೆಯುದ್ದಗಲಕ್ಕು

ತಡವಾಗಿ ಸುರಿದ ಹೊಸ ಮಳೆಯ ಹಾಗೆ

ಕೊನೆಯ ಹುಲ್ಲಿನ ಎಳೆ ಚಿಗುರು ಬಾಗಲು ನೆಲಕೆ

ಅದರ ಕನಸುಗಳಲ್ಲಿ ನಾವು ಜತೆಗೆ

 

ಯುದ್ಧ ಪ್ರೇಮಗಳಲ್ಲಿ ನಾವೆ ಗೆಲ್ಲಬುಹುದು;

ಕಾಲ ಪರಿಧಿಗಳಾಚೆ ಹತ್ತಿ ನಿಲ್ಲಲುಬಹುದು;

ಮುಗ್ಧ ರಕ್ತದ ಮರೆಗೂ ಹರಡಿ ನಿಲ್ಲುವ ಕ್ರೂರ

ಪರಿಣಾಮಗಳ ಯಾರು ನಿಲ್ಲಿಸುವರು?

 

ನಾನು ಅಲ್ಪಜ್ಞಾನಿ; ನನಗೆ ತಿಳಿಯುತ್ತಿಲ್ಲ-

ಕಣ್ಣ ಮುಂದಿದೆಯಂತೆ ಕೊನೆಯ ಹೆಜ್ಜೆ.

ಈ ಹಾಡಿಗೀ ಬಣ್ಣ ಇರುವುದಷ್ಟೇ ಗೊತ್ತು

ಗುಂಡಿಗೆಯ ಮಿಡಿತವೂ ಇದರ ಇಚ್ಛೆ.

 

ಉಪ್ಪು ಕಡಲಿನ ನಡುವೆ ಬಾಯಾರಿಕೆಗೆ ನರಳಿ

ತೂತುದೋಣಿಯ ಮೇಲೆ ನಮ್ಮ ಪಯಣ;

ದಡವ ಮುಟ್ಟುವುದೆಂದೋ ಗೊತ್ತಿಲ್ಲ; ಬರುವಿರಾ –

ಶೂನ್ಯಗಳ ಕುರಿತಷ್ಟು ಮಾತನಾಡೋಣ.

 

ಕೆ.ಎನ್. ನಾಗರಾಜ್, 

ಕಣಜನಹಳ್ಳಿ.

Leave a Reply

Your email address will not be published. Required fields are marked *

two × one =

This site uses Akismet to reduce spam. Learn how your comment data is processed.